‘ಜೆಡಿಎಸ್ ತೊರೆದಾಗ ಕಣ್ಣು ಮಬ್ಬಾಗಿತ್ತಾ? ಸಿಎಂ ವಯಸ್ಸು ಕಾಣಿಸಿಲ್ವಾ? ಭೂತದ ಬಾಯಲ್ಲಿ ಭಗವದ್ಗೀತೆ ಯಾಕೆ?’

vishwanath
Published on

ಬೆಂಗಳೂರು: ನಾಯಕತ್ವ ಬದಲಾವಣೆ ವಿಷಯದ ಜತೆ ಈಗ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕಿಕ್ ಬ್ಯಾಕ್ ಆರೋಪ ಸರ್ಕಾರದ ಬೆನ್ನಿಗಂಟಿದೆ. ಈ ಕುರಿತು ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಮೂಡಿದ್ದು, ಆರೋಪ-ಪ್ರತ್ಯಾರೋಪಕ್ಕೆ ಆಸ್ಪದ ಮಾಡಿಕೊಟ್ಟಿದೆ.

ಭದ್ರ ಮೇಲ್ದಂಡೆ ಯೋಜನೆಯ 21 ,470 ಕೋಟಿ ರೂ.ಗಳ ಕಾಮಗಾರಿಯಲ್ಲಿ ಕಿಕ್ ಬ್ಯಾಕ್ ಆರೋಪ ಮಾಡಿದ್ದ ಮೇಲ್ಮನೆ ಸದಸ್ಯ ಎಚ್.ವಿಶ್ವನಾಥ್ ವಿರುದ್ಧ ರಾಜ್ಯದ ನಿಗಮ-ಮಂಡಳಿ ಅಧ್ಯಕ್ಷರು ಗುಂಪಾಗಿ ತಿರುಗಿ ಬಿದ್ದಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ ಕಿಕ್ ಬ್ಯಾಕ್ ಆರೋಪ ಮಾಡಿದ ಬೆನ್ನಲ್ಲೇ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರುದ್ರೇಶ್ ಸೇರಿದಂತೆ 10 ನಿಗಮ-ಮಂಡಳಿ ಅಧ್ಯಕ್ಷರು/ಉಪಾಧ್ಯಕ್ಷರು ವಿಶ್ವನಾಥ್ ಅವರನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

ಜೆಡಿಎಸ್ ತೊರೆದು ಶಾಸಕತ್ವಕ್ಕೆ ರಾಜೀನಾಮೆ ನೀಡುವಾಗ ಯಡಿಯೂರಪ್ಪ ವಯಸ್ಸು, ಉತ್ಸಾಹ ನಿಮ್ಮ ಸಮಯ ಸಾಧಕತನದ ಮಬ್ಬಿನ ಕಣ್ಣಿಗೆ ಏಕೆ ಕಾಣಲಿಲ್ಲ? ನಿಮ್ಮ ಆರೋಪ ಮತ್ತು ಟೀಕೆಗಳು ಹತಾಶೆ ಹಾಗೂ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವುದನ್ನು ಬಹಿರಂಗಪಡಿಸುತ್ತಿವೆ ಎಂದು ಕೆಣಕಿದ್ದಾರೆ.

ಅಳಿಯನಿಗೆ ಆಯಕಟ್ಟಿನ ಹುದ್ದೆ ಕೊಡಿಸುವುದು, ನೆಂಟರಿಸ್ಟರಿಗೆ ಕಾಮಗಾರಿ ಗುತ್ತಿಗೆ, ಕೊಡಿವುದಕ್ಕಾಗಿ ನಿಮ್ಮ ರಾಜಕೀಯ ಜೀವನ ಮೀಸಲಿಟ್ಟಿದ್ದೀರಿ. ಇಂಥ ನಿಮಗೆ ಬೇರೆಯವರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ಸ್ವಾರ್ಥ, ಸ್ವಜನ ಪಕ್ಷಪಾತಕ್ಕೆ ರಾಜಕೀಯ ಕ್ಷೇತ್ರ ಮೀಸಲಿರಿಸಿಕೊಂಡಿದ್ದೀರಿ. ನಿಮ್ಮ ನೈತಿಕ ದಿವಾಳಿತನದ ರಾಜಕಾರಣ ಕಂಡು ಮರುಕಪಡಲೂ ಅಸಹ್ಯವೆನ್ನಿಸುತ್ತಿದೆ ಎಂದು ಜನ್ಮ ಜಾಲಾಡಿದ್ದಾರೆ.

ವೀರೇಂದ್ರ ಪಾಟೀಲ, ಬಂಗಾರಪ್ಪ, ವೀರಪ್ಪ ಮೊಯಿಲಿ, ಎಸ್.ಎಂ.ಕೃಷ್ಣ, ಎಚ್.ಡಿ.ದೇವೇಗೌಡ, ಈಗ ಯಡಿಯೂರಪ್ಪ ಅವರಿಗೆ ವಿಶ್ವಾಸಘಾತುಕತನ ಮಾಡುತ್ತಿದ್ದೀರಿ. ಯಡಿಯೂರಪ್ಪ ವಯಸ್ಸಿನ ಬಗ್ಗೆ ಮಾತನಾಡುವ ನಿಮಗೆಷ್ಟು ವಯಸ್ಸು ? ಎಂದು ಪ್ರಶ್ನಿಸಿದ್ದಾರಲ್ಲದೆ, ಬಿ.ವೈ.ವಿಜಯೇಂದ್ರ ಅವರು ಸ್ವ ಸಾಮರ್ಥ್ಯದ ಅಪರೂಪದ ಸಂಘಟನಾ ಚತುರ. ಅಂತಹವರ ವಿರುದ್ಧ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ ಎಂದು ಕೇಳಿದ್ದಾರೆ.
ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ಮಾಡುತ್ತಿರುವ ನಿಮ್ಮ ಆರೋಪಗಳು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತಿದೆ. ನೀವೊಬ್ಬ ರಾಜಕೀಯ ವ್ಯಾಪಾರಿ ಎಂದು ನಿಮಗ- ಮಂಡಳಿ ಅಧ್ಯಕ್ಷ/ಉಪಾಧ್ಯಕ್ಷರು ಹೀಯಾಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net