

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಹರಿಹಾಯುತ್ತಿರುವ ಕಾಂಗ್ರೆಸ್- ಜೆಡಿಎಸ್ ವಿರುದ್ಧ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರು ನೀಡಿರುವ ಒಬ್ಳೇ ಹೆಂಡ್ತಿ ಸವಾಲ್ ಇದೀಗ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿಬಿಟ್ಟಿದೆ.
ಮರ್ಯಾದಾ ಪುರುಷರು, ಸತ್ಯಹರಿಶ್ಚಂದ್ರರು ಯಾರ್ಯಾರು ಇದ್ದಾರೆ ಗೊತ್ತಾಗಿಹೋಗಲಿ, ತಾವು ಶ್ರೀರಾಮಚಂದ್ರರು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮಾತನಾಡುತ್ತಿದ್ದಾರಲ್ಲ. ಅವರಿಗೆ ಒಂದು ಸವಾಲ್ ಹಾಕುತ್ತೇನೆ. 225 ಜನ ಕೂಡ ತನಿಖೆಗೆ ಒಳಪಡಲಿ. ನಿಮ್ಮ ನಿಮ್ಮ ಜೀವನದಲ್ಲಿ ಯಾರು ಅನೈತಿಕ ಸಂಬಂಧ ಇಟ್ಟುಕೊಂಡಿಲ್ಲ ಎಂಬುದು ಸಾಬೀತಾಗಿ ಹೋಗಲಿ ಎಂದು ಸುಧಾಕರ್ ಹೇಳಿದ್ದರು.
ಈ ಚಾಲೆಂಜ್ಗೆ ತಾವು ರೆಡಿ ಎಂದು ಇದಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೆ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪ ಮಾಡುವ ಅವಶ್ಯಕತೆ ಏನಿತ್ತು, ರಾಜ್ಯದಲ್ಲಿ ಬೇಕಾದಷ್ಟು ಸಮಸ್ಯೆಗಳಿಗೆ, ಅವುಗಳ ಬಗ್ಗೆ ಚರ್ಚೆಯಾಗಲಿ ಎಂದಿದ್ದಾರೆ.
ಜತೆಗೆ, ಸುಧಾಕರ್ ಅವರು ತಮ್ಮ ಹೆಸರನ್ನು ಪ್ರಸ್ತಾಪ ಮಾಡಿರುವುದು ಬೇಸರ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ನೋಡಿ ಎಲ್ಲರ ಮನೆಯ ದೋಸೆಯೂ ತೂತೇ. ಇವೆಲ್ಲಾ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಪ್ರಕ್ರಿಯೆ. ಇದನ್ನು ಬೀದಿಗೆ ತರುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದ್ದಾರೆ.
"ಯಾರೂ ಸತ್ಯಹರಿಶ್ಚಂದ್ರರಲ್ಲ. ನಾನು ಇದಾಗಲೇ ಹೇಳಿಬಿಟ್ಟಿದ್ದೇನೆ. ನಾನು ಕೂಡ ಒಮ್ಮೆ ಎಡವಿದ್ದೆ ಅಂತ. ಸುಮ್ಮನೇ ನನ್ನ ಹೆಸರನ್ನು ಈ ವಿಷಯದಲ್ಲಿ ಎಳೆದು ತಂದಿರುವುದು ಸರಿಯಲ್ಲ ಎಂದರು,. ಪ್ರಾಣಿಗಳು ಕೂಡ ಈ ಕ್ರಿಯೆ ಮಾಡುತ್ತವೆ. ಅದು ದೇವರು ಕೊಟ್ಟ ಸಹಜ ಕ್ರಿಯೆ. ಇಂಥ ವಿಷಯಗಳನ್ನು ಬೀದಿಗೆ ತರುವುದು ಸರಿಯಲ್ಲ ಎಂದರು.