

ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಇದೀಗ ಬಟ್ಟೆ ಪಾಲಿಟಿಕ್ಸ್ ಶುರುವಾಗಿದೆ. ಏಟು- ತಿರುಗೇಟುಗಳು ಜೋರಾಗಿ ನಡೆಯುತ್ತಿದೆ.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಒಂದು ತಿಂಗಳೊಳಗೆ ಕಾಂಗ್ರೆಸ್ ಬಿಡಲಿದ್ದು, ಅದಕ್ಕಾಗಿಯೇ 90 ಜೊತೆ ಬಟ್ಟೆ ಖರೀದಿಸಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದು ಇದೀಗ ಸಿದ್ದರಾಮಯ್ಯ ಅವರ ಕೋಪವನ್ನು ನೆತ್ತಿಗೇರಿಸಿದೆ.
ಬಿಜೆಪಿಯಿಂದ ಹಮ್ಮಿಕೊಂಡಿದ್ದ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ ಕಟಿಲು, ಸಿದ್ದರಾಮಯ್ಯ ಈ ಹಿಂದೆ ಗುರುವಿಗೆ ತಿರುಮಂತ್ರ ಹಾಕಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಇದೀಗ ಕಾಂಗ್ರೆಸ್ನಲ್ಲಿ ತಮ್ಮ ಅಸ್ವಿತ್ವ ಕಳೆದುಕೊಳ್ಳುತ್ತಿದ್ದು, ಅದಕ್ಕಾಗಿ ತಿಂಗಳಲ್ಲಿ ಪಕ್ಷ ಬಿಡಲಿದ್ದಾರೆ. ಅದಕ್ಕಾಗಿ ಅವರು 90 ಜೊತೆ ಬಟ್ಟೆ ಹೊಲಿಸಿಕೊಂಡಿರುವುದಾಗಿ ಹೇಳಿದ್ದರು.
ಅದಕ್ಕೀಗ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಎಲ್ಲೆಲ್ಲೋ ಹೋಗಿ ಬಟ್ಟೆ ಬಿಚ್ಚಿ ರಾಜ್ಯದ ಮರ್ಯಾದೆ ಕಳೆಯುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ದಾನ ಮಾಡಲು 9೦ ಜೊತೆ ಬಟ್ಟೆ ಖರೀದಿ ಮಾಡಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.
ಬೇಕಿದ್ರೆ ನಳೀನ್ ಕುಮಾರ್ ಕಟೀಲ್ ಗೆ ಒಂದೆರಡು ಜೊತೆ ದಾನ ಮಾಡ್ತೀನಿ. ಇನ್ನೂ 19 ಸಿಡಿ ಇವೆಯಂತೆ, ಎಲ್ಲವೂ ಹಿಡಿತದಲ್ಲಿರಲಿ..ನಾಲಿಗೆ ಸಹ ಎಂದು ಹೇಳಿದ್ದಾರೆ.