ಷಾರ್ಟ್‌ ಸರ್ಕ್ಯೂಟ್‌: ವಿಜಯಪುರದ ಯೋಧ ಹುತಾತ್ಮ

yodha
Published on

ವಿಜಯಪುರ: ವಿದ್ಯುತ್ ಷಾರ್ಟ್ ಸರ್ಕ್ಯೂಟ್‌ನಿಂದಾಗಿ ಜಮ್ಮು ಕಾಶ್ಮಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀಯ ಗಡಿ ಭದ್ರತಾ ಪಡೆಯ ಯೋಧ ಶಿವಾನಂದ ಜಗನ್ನಾಥ ಬಡಿಗೇರ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.

ಜಮ್ಮು ಕಾಶ್ಮೀರದ ಬಿಎಸ್ಎಫ್ ಹೌಸ್‌ನಲ್ಲಿ ವಿದ್ಯುತ್ ದುರಸ್ತಿ ಮಾಡುವಾಗ ಈ ದುರಂತ ಸಂಭವಿಸಿದೆ ಎಂದು ಬಿಎಸ್ಎಫ್ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಇವರಿಗೆ 29 ವರ್ಷ ವಯಸ್ಸಾಗಿತ್ತು. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಬಸರಕೋಡ ಗ್ರಾಮದವರಾಗಿದ್ದ ಶಿವಾನಂದ ಅವರು ಜಮ್ಮು ಕಾಶ್ಮಿರದ ಗಡಿ ಭದ್ರತಾ ಪಡೆಯಲ್ಲಿ ಎಲೆಕ್ಟ್ರಿಕ್‌ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಬಡಿಗೇರ್‌ ಅವರು ಒಂಬತ್ತು ವರ್ಷಗಳಿಂದ ಬಿಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ವರ್ಷದ ಹಿಂದೆ ಜಗನ್ನಾಥ ಅವರಿಗೆ ಮದುವೆಯಾಗಿದ್ದು ಪತ್ನಿ, ತಂದೆ, ತಾಯಿ, ಮೂವರು ಸಹೋದರರು, ಸಹೋದರಿ ಇದ್ದಾರೆ. ಇವರ ಹಿರಿಯಣ್ಣನೂ ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net