ಹಸುಗಳು ಹಾಲು ಕೊಡುತ್ತಿಲ್ಲ, ಒದೀತಿವೆ, ಬುದ್ಧಿ ಹೇಳಿ ಎಂದು ‍ಪೊಲೀಸ್‌ ಠಾಣೆಗೆ ಬಂದ ಶಿವಮೊಗ್ಗದ ರೈತ!

cow1
Published on

ಶಿವಮೊಗ್ಗ: ಹಸುಗಳು ಹಾಲು ಕೊಡದೇ, ಒದಿಯುತ್ತಿರುವುದಾಗಿ ದೂರಿ ರೈತನೊಬ್ಬ ಪೊಲೀಸ್‌ ಠಾಣೆಯ ಮೆಟ್ಟಿಲೇರಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನ ಸಿದ್ಲಿಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಾಮಯ್ಯ ಎಂಬ ರೈತ ತನ್ನ ಹಸುವಿನ ಜತೆಗೆ ಪೊಲೀಸ್‌ ಠಾಣೆಗೆ ಹೋಗಿ ದೂರು ಸಲ್ಲಿಸಿದ್ದಾನೆ.

ಇಷ್ಟು ದಿನ ಚೆನ್ನಾಗಿಯೇ ಇದ್ದ ತಮ್ಮ ಹಸುಗಳು ಈಗ ಏಕಾಏಕಿ ಹಾಲು ಕೊಡುತ್ತಿಲ್ಲ. ಹಾಲನ್ನು ಹಿಂಡಲು ಹೋದಾಗ ಒದಿಯುತ್ತಿದೆ. ನೀವೇ ಬುದ್ಧಿಹೇಳಿ ಎಂದು ರೈತ ಪೊಲೀಸರಿಗೆ ದುಂಬಾಲು ಬಿದ್ದಿದ್ದಾನೆ.

ನಾನು ನಾಲ್ಕು ಹಸುಗಳನ್ನು ಸಾಕಿದ್ದೇನೆ. ಇವುಗಳನ್ನು ದಿನವೂ ಬೆಳಗ್ಗೆ ಎಂಟು ಗಂಟೆಯಿಂದ 11 ಗಂಟೆವರೆಗೂ ಹಾಗೂ ಸಂಜೆ ನಾಲ್ಕು ಗಂಟೆಯಿಂದ ಆರು ಗಂಟೆವರೆಗೂ ಮೇಯಿಸಿಕೊಂಡು ಬರುತ್ತೇನೆ. ಆದರೆ ನಾಲ್ಕೈದು ದಿನಗಳಿಂದ ಹಾಲನ್ನು ಕರೆಯಲು ಹೋದರೆ ಅವು ಒದಿಯುತ್ತಿವೆ. ಒಂದಲ್ಲ, ಎಲ್ಲಾ ಹಸುಗಳೂ ಹೀಗೆ ಮಾಡುತ್ತಿರುವುದರಿಂದ ಸಮಸ್ಯೆಯಾಗಿದೆ. ನನ್ನ ಪತ್ನಿ ರತ್ನಮ್ಮ ಕೂಡ ಹಾಲು ಕರಿಯುತ್ತಾಳೆ. ಆದರೆ ಅವಳಿಗೂ ಹಸುಗಳು ಒದೆಯುತ್ತಿವೆ ಎಂದು ರಾಮಯ್ಯ ದೂರಿದ್ದಾರೆ.

ಎಂತೆಂಥವರಿಗೋ ಬುದ್ಧಿ ಹೇಳಿ ಸರಿದಾರಿಗೆ ತರುವ ನೀವು, ಈ ಹಸುಗಳಿಗೂ ಬುದ್ಧಿ ಹೇಳಿ, ನಮ್ಮನ್ನು ಜಾಡಿಸಿ ಒದಿಯದಂತೆ ಏನಾದರೂ ಮಾಡಿ, ನಮಗೆ ನ್ಯಾಯ ಕೊಡಿಸಿ ಎಂದು ಅವರು ದೂರಿನಲ್ಲಿ ವಿವರಣೆ ನೀಡಿದ್ದಾರೆ. ಸದ್ಯ ಪೊಲೀಸರು ರಾಮಯ್ಯನ ಜತೆ ಮಾತುಕತೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net