

ಬೆಂಗಳೂರು: ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜು ಪರವಾನಗಿ ತನಿಖೆಯ ವಿಷಯದಲ್ಲಿ ಸರ್ಕಾರ ಹಾಗೂ ಜೆಡಿಎಸ್ ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ವಿಧಾನ ಪರಿಷತ್ ನಲ್ಲಿ ಮಾತಿನ ಕೋಲಾಹಲ ಉಂಟಾಯಿತು.
ಸಭಾಪತಿ ಬಸವರಾಜ ಹೊರಟ್ಟಿ ಪದೇ ಪದೆ ವಿನಂತಿಸಿ, ಗದರಿಸಿ ನಿಯಂತ್ರಿಸಲು ಪ್ರಯತ್ನಿಸಿದರೂ ಗದ್ದಲ ಮುಂದುವರಿದ ಕಾರಣ ಕಲಾಪವನ್ನು ಸೋಮವಾರ ಬೆಳಗ್ಗೆ 10.30ಕ್ಕೆ ಮುಂದೂಡಿದರು.
ಸುದೀರ್ಘ ಉತ್ತರ ನೀಡಿದ ಸಚಿವ ಡಾ.ಕೆ.ಸುಧಾಕರ್, ತಜ್ಞರನ್ನು ಒಳಗೊಂಡ ಉನ್ನತಮಟ್ಟದ ಸಮಿತಿಯನ್ನು ತನಿಖೆಗೆ ನೇಮಿಸುವುದಾಗಿ ಪ್ರಕಟಿಸಿದರೆ, ಧರಣಿ ಮುಂದುವರಿಸಿದ ಜೆಡಿಎಸ್ ಸದನ ಸಮಿತಿಗೆ ಪಟ್ಟು ಮುಂದುವರಿಸಿತು.
ದುಡ್ಡು ಹೊಡೆಯುವ ದಂಧೆ ಬೇಡ. ಸತ್ಯಹರಿಶ್ಚಂದ್ರರು, ಪ್ರಾಮಾಣಿಕರಾಗಿದ್ದರೆ ಸದನ ಸಮಿತಿ ರಚಿಸಿ ಎಂದು ಮರಿತಿಬ್ಬೇಗೌಡ ಕೆಣಕುವ ದಾಟಿಯಲ್ಲಿ ಹೇಳಿದ್ದನ್ನು ಬಿಜೆಪಿ ಸದಸ್ಯರು, ಸಚಿವರು ತೀವ್ರವಾಗಿ ವಿರೋಧಿಸಿದರು. ಪರಸ್ಪರ ಹೀಗಳೆಯುವ ನಡುವೆ ಮತವಿಭಜನೆಯಾಗಲೆಂದ ಪ್ರತಿಪಕ್ಷ ನಾಯಕರ ಸಲಹೆಯನ್ನು ನಿಯಮಾವಳಿ ವ್ಯಾಪ್ತಿಗೆ ಬರದು ಎಂದು ಸಭಾಪತಿ ತಳ್ಳಿಹಾಕಿದರು.