

ಬೆಂಗಳೂರು: ರಾಜಕೀಯ ದುರುದ್ದೇಶದಿಂದ ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ಗಲಭೆ ಸೃಷ್ಟಿಸಿ, ಬೆಂಕಿ ಹಚ್ಚಿಸಿರುವ ಪ್ರಮುಖ ಆರೋಪಿ ಕಾಂಗ್ರೆಸ್ನ ಮಾಜಿ ಮೇಯರ್ ಸಂಪತ್ ಕುಮಾರ್ ಆಸ್ಪತ್ರೆಯಿಂದ ಪರಾರಿಯಾಗಿರುವುದಾಗಿ ವರದಿಯಾಗಿದೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಸೇರಿದಂತೆ ಪೊಲೀಸ್ ಠಾಣೆ ಇನ್ನಿತರ ಕಡೆಗಳಲ್ಲಿ ಬೆಂಕಿ ಹಚ್ಚಿಸಿ ನಂತರ ಸಿಕ್ಕಿಬಿದ್ದಿರುವ ಸಂಪತ್ ಕುಮಾರ್ ಕರೊನಾದ ಹೆಸರು ಹೇಳಿ ಬೆಂಗಳೂರಿನ ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಸಿಸಿಬಿನ ತನಿಖಾಧಿಕಾರಿಗಳು ತಮ್ಮನ್ನು ಬಂಧಿಸಲು ಬರುವ ಸುದ್ದಿ ತಿಳಿಯುತ್ತಲೇ ಕರೊನಾ ರಿಪೋರ್ಟ್ ನೀಡಿ ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಗೆ ದಾಖಲಾಗಿ ಎರಡು ತಿಂಗಳಾಗುತ್ತಾ ಬಂದರೂ ಆಸ್ಪತ್ರೆಯ ವೈದ್ಯರು ಸಂಪತ್ಗೆ ಹುಷಾರಿಲ್ಲವೆಂಬ ವರದಿ ನೀಡುತ್ತಲೇ ಬಂದಿದ್ದಾರೆ. ಈ ಬಗ್ಗೆ ಹಲವು ಅನುಮಾನಗಳು ಸುಳಿದಾಡುತ್ತಿರುವ ನಡುವೆಯೇ ನಿನ್ನೆ ರಾತ್ರಿ ಸಂಪತ್ಕುಮಾರ್ ಅವರು ಪರಾರಿಯಾಗಿರುವುದಾಗಿ ಸುದ್ದಿಯಾಗಿದೆ.
ಅವರು ಕೇರಳದ ಕಡೆಗೆ ಹೋಗಿದ್ದಾರೆ ಎನ್ನಲಾಗಿದ್ದು, ಸಿಸಿಬಿ ಪೊಲೀಸರು, ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಇದರ ಸತ್ಯಾಸತ್ಯತೆ ಅಧಿಕೃತವಾಗಿ ಬಹಿರಂಗಗೊಳ್ಳಬೇಕಿದೆ.
ಇದಾಗಲೇ ಎರಡು ಬಾರಿ ಕರೊನಾ ಸೋಂಕಿನ ನೆಪ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದ ಸಂಪತ್ಕುಮಾರ್ಗೆ ಇದೀಗ ಮೂರನೆಯ ಬಾರಿ ಸೋಂಕು ತಗುಲಿದೆ ಎಂದು ವೈದ್ಯರು ರಿಪೋರ್ಟ್ ಕೊಟ್ಟಿದ್ದರು. ಅದನ್ನು ಸಿಸಿಬಿಗೆ ರವಾನೆ ಮಾಡಲಾಗಿತ್ತು.
ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ತನಿಖಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದದ ಸಂದರ್ಭದಲ್ಲಿ ಇವೆಲ್ಲಾ ಸುಳ್ಳು ಎಂಬುದು ಪ್ರಾಥಮಿಕ ವರದಿಯಿಂದ ತಿಳಿದುಬಂದಿತ್ತು. ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರಿಗೆ ಸಿಸಿಬಿ ವರದಿ ನೀಡಿತ್ತು. ಅವರು ಇನ್ನಷ್ಟೇ ಈ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳುವುದಿದ್ದರು.
ತನ್ನ ಅಸಲಿ ಬಣ್ಣ ತಿಳಿಯುತ್ತಲೇ ಸಂಪತ್ರಾಜ್ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಫೇಸ್ಬುಕ್ನಲ್ಲಿ ಹಿಂದೂ ದೇವತೆಗಳ ವಿರುದ್ಧ ಪೋಸ್ಟ್ ಮಾಡಿದ್ದ ಒಬ್ಬನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಖಂಡ ಶ್ರೀನಿವಾಸ ಅವರ ಅಳಿಯ ನವೀನ್ ಎಂಬಾತ ಅದಕ್ಕೆ ಪೈಗಂಬರ್ ವಿರುದ್ಧ ಹಾಕಿದ್ದ ಕಮೆಂಟ್ ಅನ್ನೇ ಮುಂದುಮಾಡಿಕೊಂಡು ಗಲಭೆ ಸೃಷ್ಟಿಸಿರುವ ವಿವಾದ ಇದಾಗಿದೆ.