

ಮಾಯಕೊಂಡ: ವಸತಿ ಶಾಲೆಗಳು ಹೆಚ್ಚಾದಂತೆ ಶೈಕ್ಷಣಿಕ ಪ್ರಗತಿಯು ಉಜ್ವಲಗೊಳ್ಳುತ್ತದೆ ಎಂದು ಗಣಿ ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಹೋಬಳಿ ಸಮೀಪದ ಅಣಜಿ ಗ್ರಾಮದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಹಾಗೂ ಕರ್ನಾಟಕ ರಾಜ್ಯ ವಸತಿ ಶಿಕ್ಷಣಗಳ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಇಂದಿರಾಗಾಂಧಿ ವಸತಿ ಶಾಲೆಯ ನೂತನ ಕಟ್ಟಡ ( ಪರಿಶಿಷ್ಟ ಜಾತಿ)ವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಶೈಕ್ಷಣಿಕ ಪ್ರಗತಿಯ ಹಿತ ದೃಷ್ಟಿಯಿಂದ ವಸತಿ ಶಾಲೆಗಳ ಅಭಿವೃದ್ಧಿ, ಮೂಲಸೌಕರ್ಯಗಳನ್ನು ಒದಗಿಸುವುದು ಸೇರಿ ಶಿಕ್ಷಣಕ್ಕೆ ಯಾವುದೇ ಕೊರತೆ ಆಗದಂತೆ ಸರ್ಕಾರ ಕ್ರಮ ವಹಿಸಿದೆ ಎಂದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಶಿಕ್ಷಣ ಬೆಲೆ ಕಟ್ಟಲಾಗದ ಆಸ್ತಿ, ಯಾವೊಬ್ಬ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವುದೇ ಸರ್ಕಾರದ ಮೂಲ ಉದ್ದೇಶ. ಆದ್ದರಿಂದ ಅಧಿಕಾರಿಗಳು ಮೂಲ ಸೌಲಭ್ಯ ವಂಚಿತ ಶಾಲೆಗಳನ್ನು ಪಟ್ಟಿಮಾಡಿ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.
ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಅಣಜಿ ಗ್ರಾಮದಲ್ಲಿ 17 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ವಣವಾಗಿರುವ ಇಂದಿರಾಗಾಂಧಿ ವಸತಿ ಶಾಲೆಯ ಕಟ್ಟಡ ಉತ್ತಮ ಸೌಕರ್ಯಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ವಸತಿ ಶಾಲೆಯ ಉಪಯೋಗ ಪಡೆಯಬೇಕೆಂದು ತಿಳಿಸಿದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್, ಅಲ್ಪಸಂಖ್ಯಾತ ಇಲಾಖೆಯ ಉಪನಿರ್ದೇಶಕ ಭಕ್ತ ಮಾರ್ಕಂಡೇಯ, ತಹಸೀಲ್ದಾರ್ ಅಶ್ವತ್ಥ, ತಾಪಂ ಇಒ ರಾಮಭೋವಿ, ಪ್ರಾಚಾರ್ಯ ಮುದೋಬನಾಯಕ, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ. ಚಂದ್ರಣ್ಣ, ಗ್ರಾಪಂ ಅಧ್ಯಕ್ಷ ಲೋಕಣ್ಣ, ಗ್ರಾಪಂ ಉಪಾಧ್ಯಕ್ಷ ಕಲ್ಪನಾ ಪರಶುರಾಮ್ ಮಾಜಿ ತಾಪಂ ಸದಸ್ಯ ಶಿವಣ್ಣ, ಬಸವಲಿಂಗಪ್ಪ, ರಾಜಣ್ಣ, ಶಿವಮೂರ್ತಿ, ಹಾಲೇಶಣ್ಣ ಇತರರಿದ್ದರು.