

ಬೆಂಗಳೂರು: ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪುಟ್ಟ ಮಕ್ಕಳಿಂದ ರಾಖಿಯನ್ನು ಕಟ್ಟಿಸಿಕೊಳ್ಳುವ ಮೂಲಕ ರಕ್ಷಾ ಬಂಧನವನ್ನು ರಾಜಭವನದಲ್ಲಿಂದು ಆಚರಿಸಿದರು.
ರಾಷ್ಟ್ರೋತ್ಥಾನ ಪರಿಷತ್ನ ಮಕ್ಕಳು ತಮ್ಮ ಪರಿಚಯ ಮಾಡಿಕೊಂಡ ರಾಜ್ಯಪಾಲರಿಗೆ ರಾಖಿ ಕಟ್ಟಿ ಸಂಭ್ರಮಿಸಿದರು. ರಾಜ್ಯಪಾಲರು ಮಕ್ಕಳಿಗೆ ಸಿಹಿ ವಿತರಿಸಿ, ಆಶೀರ್ವದಿಸಿದರು.
ನಂತರ ಮಕ್ಕಳೊಂದಿಗೆ ಸಂವಾದ ನಡೆಸಿದ ರಾಜ್ಯಪಾಲರು, 75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ದೇಶಾದ್ಯಂತ ಅಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಮಕ್ಕಳು ಈ ಸಂಭ್ರಮದಲ್ಲಿ ಭಾಗವಹಿಸುವ ಮೂಲಕ ದೇಶದ ಏಕತೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹಿರಿಯರನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸಬೇಕು. ಹರ್ ಘರ್ ತಿರಂಗಾ ಅಭಿಯಾನದಲ್ಲಿ ಮಕ್ಕಳು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕರ್ನಾಟಕದಲ್ಲಿ ಮಕ್ಕಳೊಂದಿಗೆ ರಕ್ಷಾ ಬಂಧನ ಹಬ್ಬ ಆಚರಿಸುತ್ತಿರುವುದು ಬಹಳ ಸಂತಸ ತಂದಿದೆ ಎಂದರು. ಇದೇ ಸಂದರ್ಭದಲ್ಲಿ ರಾಜ್ಯಪಾಲರು ರಾಜ್ಯದ ಜನತೆಗೆ ಹಾಗೂ ಮಕ್ಕಳಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು.