ರಾಗಿಣಿಯ ಕನಸಿನ ಮನೆ ಮಾರಾಟಕ್ಕಿದೆ! ಮಗಳ ನಶೆನಂಟಿಗೆ ನಲುಗಿಹೋದ ಅಪ್ಪ

ragini house
Published on

ಬೆಂಗಳೂರು: ನಗರದ ಜ್ಯುಡಿಶಿಯಲ್ ಲೇಔಟ್​ನಲ್ಲಿರುವ ನಟಿ ರಾಗಿಣಿ ದ್ವಿವೇದಿ ಅವರು ಮನೆಯನ್ನು ಅವರ ತಂದೆ ಮಾರಾಟಕ್ಕೆ ಇಟ್ಟಿದ್ದಾರೆ.

ಡ್ರಗ್ಸ್ ಕೇಸ್​ನಲ್ಲಿ ಸಿಕ್ಕಿಕೊಂಡಿರುವ ಮಗಳ ಕೋರ್ಟ್​, ವಕೀಲರ ಫೀಸು ಇತ್ಯಾದಿಗಳಿಗೆ ಹಣ ಹೊಂದಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಕನಸಿನ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಖಾಸಗಿ ವೆಬ್​ಸೈಟ್​ ಒಂದರಲ್ಲಿ ರಾಗಿಣಿ ತಂದೆ ರಾಕೇಶ್ ದ್ವಿವೇದಿ ಮನೆ ಸೇಲ್​ಗೆ ಇದೆ ಎಂಬ ಜಾಹೀರಾತು ನೀಡಿದ್ದಾರೆ.

ನ್ಯಾಯಾಂಗ ಬಡಾವಣೆಯ ಅನನ್ಯ ಅಪಾರ್ಟ್​ಮೆಂಟ್​ನಲ್ಲಿ ಇರುವ ತಮ್ಮ ಮೂರು ಬಿಎಚ್​ಕೆ ಮನೆಯನ್ನು 2 ಕೋಟಿ ರೂಪಾಯಿಗೆ ಸೇಲ್​ಗೆ ಇಟ್ಟಿದ್ದಾರೆ.

ವಕೀಲರಿಗೆ ಫೀಸ್​ ಕೊಡಲು ನನ್ನ ಬಳಿ ಹಣವಿಲ್ಲ. ಆದ್ದರಿಂದ ಮನೆ ಮಾರಾಟ ಮಾಡುತ್ತಿರುವುದಾಗಿ ಆಪ್ತರ ಬಳಿ ರಾಕೇಶ್​ ಅವರು ಅಳಲು ತೋಡಿಕೊಂಡಿರುವುದಾಗಿ ತಿಳಿದುಬಂದಿದೆ.

ಇದು ರಾಗಿಣಿಯ ಕನಸಿನ ಮನೆ ಕೂಡ. ಈ ಮನೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮಗೆ ಇಷ್ಟವಾಗಿರುವ ರೀತಿಯಲ್ಲಿ ಇಂಟೀರಿಯರ್ ಡಿಸೈನ್ ಮಾಡಿಸಿದ್ದರು ರಾಗಿಣಿ. ತಮ್ಮ ಅಕ್ರಮ ಡ್ರಗ್ಸ್​ ದಂಧೆಯ ಹಣದಲ್ಲಿ ಈ ಹಣವನ್ನು ಕಟ್ಟಿಕೊಂಡಿದ್ದು, ಸದ್ದಿಲ್ಲದೇ ಮನೆ ಮಾರಿ ಕೈ ತೊಳೆದುಕೊಳ್ಳುತ್ತಿದ್ದಾರೆ ರಾಗಿಣಿ ಪಾಲಕರು ಎಂಬ ಆರೋಪವೂ ಕೇಳಿಬರುತ್ತಿದೆ.

ಈ ನಡುವೆ, ರಾಗಿಣಿ ತಂದೆ ರಾಕೇಶ್​ ಅವರು, ತುಂಬಾ ನೊಂದುಬೆಂದು ಹೋಗಿದ್ದು, ಸಾರ್ವಜನಿಕವಾಗಿ, ಅಕ್ಕಪಕ್ಕದವರ ಜತೆ ಹೆಚ್ಚು ಮಾತನಾಡುತ್ತಿಲ್ಲ ಎಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net