

ಧಾರವಾಡ: ಜನರ ಪ್ರೀತಿ, ವಿಶ್ವಾಸ ಗಳಿಸಿ ಬೆಳೆದ ನಾಯಕ ಚುನಾವಣೆಯಲ್ಲಿ ಸೋತರೂ ಬದುಕಿನಲ್ಲಿ ಸೋಲುವುದಿಲ್ಲ. ಸಮಾಜದಲ್ಲಿ ದೊರೆಯುವ ಗೌರವದಿಂದ ಆತ ನಾಯಕನಾಗಿರುತ್ತಾನೆ. ಅಂಥವರ ಸಾಲಿನಲ್ಲಿ ಎಸ್.ಆರ್. ಮೋರೆ ನಿಲ್ಲುತ್ತಾರೆ. ಅವರು ತಮ್ಮ ಅಧಿಕಾರ ಅವಧಿಯಲ್ಲಿ ಬಡವರು ವಾಸಿಸುವ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ ಅಜರಾಮರರಾಗಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಇಲ್ಲಿನ ರಾಜೀವಗಾಂಧಿನಗರದ ಎಸ್.ಆರ್. ಮೋರೆ ಸಮುದಾಯ ಭವನದಲ್ಲಿ ಮಾಜಿ ಸಚಿವ ಎಸ್.ಆರ್. ಮೋರೆ ಅವರ 89ನೇ ಜನ್ಮದಿನ ಹಾಗೂ 2ನೇ ಪುಣ್ಯಸ್ಮರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಎಸ್.ಆರ್. ಮೋರೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜಸೇವೆ ವ್ಯಕ್ತಿಯ ಬದುಕಿಗೆ ಸಂತೃಪ್ತಿ ನೀಡುತ್ತದೆ. ಈ ದಿಶೆಯಲ್ಲಿ ಮೋರೆ ಅವರು ರಾಜಕೀಯ ಬದುಕಿನಲ್ಲಿ ಬಡ ಜನರಿಗೆ ಸಹಾಯ, ಸಹಕಾರದ ಮೂಲಕ ಅಪಾರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅವರ ಪುತ್ರಿ ಕೀರ್ತಿ ಮೋರೆ ತಂದೆಯ ಮಾರ್ಗದಲ್ಲಿ ಸಮಾಜ ಸೇವೆ ಮಾಡಲಿ ಎಂದರು.
ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಮಾತನಾಡಿ, ಶ್ರಮ ವಹಿಸಿ ಕೆಲಸ ಮಾಡುವುದರಿಂದ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಮೋರೆ ಅವರ ಆದರ್ಶಗಳನ್ನು ಉಳಿಸಿಕೊಂಡು ಹೋಗುವ ಕೆಲಸ ಅವರ ಕುಟುಂಬದವರಿಂದ ಆಗಲಿ ಎಂದರು.
ಮಾಜಿ ಸಂಸದ ಮಂಜುನಾಥ ಕುನ್ನೂರರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಎಸ್.ಆರ್. ಮೋರೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಉದ್ಘಾಟಿಸಿದರು. ಮಾಜಿ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಮುಖಂಡರಾದ ರಾಜಶೇಖರ ಮೆಣಸಿನಕಾ, ಆರ್.ಕೆ. ಪಾಟೀಲ, ಪಿ.ಎಚ್. ನೀರಲಕೆರಿ, ಡಾ. ಜಗದೀಶ್, ಡಾ. ಸ್ನೇಹಲ್ ರೆಡ್ಡಿ, ಇತರರಿದ್ದರು.
ಇದೇವೇಳೆ ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ಸಾರ್ವಜನಿಕರ ಕಣ್ಣು, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ರಕ್ತದೊತ್ತಡ, ಮಹಿಳೆಯರ ಆರೋಗ್ಯ ಸಂಬಂಧಿ ತಪಾಸಣೆ ನಡೆಸಲಾಯಿತು.