ಪಿಎಸ್‌ಐ ಪರೀಕ್ಷೆ ಗೋಲ್‌ಮಾಲ್‌: ಹತ್ತು ಲಕ್ಷ ರೂ. ಇತ್ತ ತಳ್ಳಿ, ಅಕ್ರಮ ಮಾಡ್ಕೊಂಡು ತಣ್ಣಗಿರಿ ಎಂದಿದ್ದ ಡಿವೈಎಸ್ಸಿ!

sali
Published on

ಕಲಬುರಗಿ: 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಗೋಲ್‌ಮಾಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕುತೂಹಲ ಎನಿಸುವ ಒಂದೊಂದೇ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ದೊಡ್ಡ ದೊಡ್ಡ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವ ಶಂಕೆ ತನಿಖಾಧಿಕಾರಿಗಳಿಗೆ ಮೂಡುತ್ತಿದ್ದು, ಇದಾಗಲೇ ಹಲವರ ಬಂಧನವೂ ಆಗಿದ್ದು, ವಿಚಾರಣೆ ನಡೆಯುತ್ತಿದೆ.

ಈ ಮಧ್ಯೆ, ಅಕ್ರಮ ನಡೆಸುತ್ತಿದ್ದವರಿಗೇ ಬ್ಲ್ಯಾಕ್‌ಮೇಲ್ ಮಾಡಿ ಪ್ರಕರಣ ಮುಚ್ಚಿಹಾಕುವ ಪ್ರಯತ್ನದ ಆರೋಪದ ಮೇಲೆ ಸಿಐಡಿ ಅಧಿಕಾರಿಗಳು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಅವರನ್ನು ಬಂಧಿಸಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ಡಿವೈಎಸ್ಪಿ ಆಗಿರುವ ಇವರು ಅಕ್ರಮದ ಕಿಂಗ್‌ಪಿನ‌ಗಳಿಂದ ಲಂಚ ಪಡೆದಿರುವ ಆರೋಪ ಎದುರಿಸುತ್ತಿದ್ದಾರೆ.

ಜ್ಞಾನಜೋತಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಪಿಎಸ್ಐ ಪರೀಕ್ಷೆ ವೇಳೆ ಅಕ್ರಮದ ಮಾಹಿತಿ ಪಡೆದಿದ್ದ ಸಾಲಿ ಅವರು ಅಕ್ರಮ ಎಸಗಿದವರಿಂದ 10 ಲಕ್ಷ ರೂಪಾಯಿ ಲಂಚ ಪಡೆದು ಕೇಸನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಪಿಎಸ್ಐ ಪರೀಕ್ಷೆ ಮುಗಿದ ಕೆಲ ದಿನದಲ್ಲಿ ಇವರಿಗೆ ಅಕ್ರಮದ ಕುರಿತು ಮಾಹಿತಿ ಸಿಕ್ಕಿತ್ತು. ಎಲೆಕ್ಟ್ರಾನಿಕ್ ಬ್ಲೂಟೂತ್ ಡಿವೈಸ್ ಮೂಲಕ ಪರೀಕ್ಷಾ ಅಕ್ರಮ ಮಾಡಿರೋ ಬಗ್ಗೆ ಮಾಹಿತಿ ಪಡೆದಿದ್ದ ಸಾಲಿ ಅವರು, ಅಕ್ರಮದ ಬಗ್ಗೆ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ, ಹೆಡ್ ಮಾಸ್ಟರ್ ಕಾಶಿನಾಥಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಕೊನೆಗೆ ಹತ್ತು ಲಕ್ಷ ಹಣ ನೀಡಿದರೆ ಈ ಅಕ್ರಮದ ಬಗ್ಗೆ ಬಾಯಿ ಬಿಡುವುದಿಲ್ಲ ಎಂದು ಬೇಡಿಕೆಯೊಡ್ಡಿದ್ದರು, ಇಲ್ಲದಿದ್ದರೆ ಮಾಹಿತಿ ಲೀಕ್ ಮಾಡೋ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದಕ್ಕೆ ಹೆದರಿ ದಿವ್ಯಾ ಹಾಗೂ ಕಾಶಿನಾಥ ಹತ್ತು ಲಕ್ಷ ಹಣ ನೀಡಿದ್ದರು ಎನ್ನಲಾಗಿದ್ದು, ಈ ಕುರಿತು ಬಂಧನದಲ್ಲಿರುವ ದಿವ್ಯಾ ಮತ್ತು ಕಾಶಿನಾಥ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ!

ಹಣ ಪಡೆದಿರೋ ಬಗ್ಗೆ ಇದಾಗಲೇ ಸಿಐಡಿ ಅಧಿಕಾರಿಗಳು ಮಾಹಿತಿ ‌ಸಂಗ್ರಹಿಸಿದ್ದರು. ಅದರ ಆಧಾರದ ಮೇಲೆ ವಿಚಾರಣೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಸಾಲಿ ಅವರನ್ನು ಬಂಧಿಸಲಾಗಿದೆ. ಇವರು ಪಿಎಸ್ಐ ಪರೀಕ್ಷೆ ನಡೆದ ಸಮಯದಲ್ಲಿ, ಆಳಂದ ಡಿವೈಎಸ್ಪಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net