ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದವರ ಬುಡಕ್ಕೆ ಬೆಂಕಿ ಇಟ್ಟ ಅನುಭವ: ರೀ ಓಪನ್‌ ಆಯ್ತು ಕೇಸು...

examgolmal
Published on

ಕಲಬುರಗಿ: ಪಿಎಸ್‌ಐ ಪರೀಕ್ಷೆ ಸೇರಿದಂತೆ ಹಲವು ಪರೀಕ್ಷೆಗಳಲ್ಲಿ ಅಕ್ರಮ ಎಸಗಿ ಮಾಡಬಾರದ್ದನ್ನು ಮಾಡಿದವರಿಗೆಲ್ಲಾ ಇದೀಗ ಬುಡಕ್ಕೆ ಬೆಂಕಿ ಇಟ್ಟ ಅನುಭವವಾಗುತ್ತಿದೆ. ಈ ಪ್ರಕರಣದಲ್ಲಿ ಇದಾಗಲೇ ಹಲವಾರು ಮಂದಿ ಬಂಧಿತರಾಗಿದ್ದು, ತಪ್ಪಿಸಿಕೊಂಡವರಿಗೆ ತಲೆಬಿಸಿ ಶುರುವಾಗಿದೆ. ಯಾವಾಗ ತಮ್ಮ ಬುಡಕ್ಕೆ ಬರುವುದೋ ಎಂಬ ಚಿಂತೆ ಕಾಡತೊಡಗಿದೆ.

ಈ ನಡುವೆಯೇ ಪಿಡಬ್ಲೂಡಿ ಜೆಇ,ಎಇ ಪರೀಕ್ಷೆಯಲ್ಲಿ ನಡೆದ ಅಕ್ರಮದ ಪ್ರಕರಣವೊಂದಕ್ಕೆ ಇದೀಗ ಪುನಃ ಚಾಲನೆ ದೊರೆತಿದ್ದು, ಆರೋಪಿಗಳಿಗೆ ನಡುಕ ಶುರುವಾಗಿದೆ. ಪರೀಕ್ಷಾ ಸಮಯದಲ್ಲಿ ಇಲೆಕ್ಟ್ರಾನಿಕ್ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಮುಂದಾಗಿದ್ದ ವೀರಣಗೌಡ ಅನ್ನೋ ಅಭ್ಯರ್ಥಿ ಮುಂದಾಗಿದ್ದು, ಈತನ ವಿರುದ್ಧ ಕಳೆದ ಡಿಸೆಂಬರ್ 14 ರಂದು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೆಂಗಳೂರು ಸೆಂಟ್ ಜಾನ್ಸ್ ಶಾಲೆಯ ಸಿಬ್ಬಂದಿ ಇದಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದರು. ಪರೀಕ್ಷಾ ಅಕ್ರಮಗಳಲ್ಲಿ ಇದಾಗಲೇ ಆರೋಪಿಯಾಗಿರುವ ರುದ್ರಗೌಡ ಪಾಟೀಲ್ ಕೂಡ ಈ ಪರೀಕ್ಷೆಯ ಕಿಂಗ್‌ಪಿನ್‌ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇಲ್ಲಿಯವರೆಗೆ ತಣ್ಣಗಿದ್ದ ಕೇಸ್‌ ಈಗ ಪಿಎಸ್‌ಐ ನೇಮಕಾತಿ ಅಕ್ರಮದ ನಂತರ ರೀ ಓಪನ್ ಆಗಿದೆ.

ಪ್ರಕರಣದಲ್ಲಿ ಏಳನೇ ಆರೋಪಿಯಾಗಿದ್ದ ರುದ್ರಗೌಡ ಪಾಟೀಲ್, ತನ್ನ ಹೆಸರನ್ನು ಚಾರ್ಜ‌ಷೀಟ್‌ನಿಂದ ಬಿಡುವಂತೆ ಮನವಿ ಮಾಡಿರುವುದು ತಿಳಿದುಬಂದಿದೆ. ಇದೇ ರುದ್ರಗೌಡ ಪಾಟೀಲ್ ಪಿಡಬ್ಲೂಡಿ ಪರೀಕ್ಷೆ ಅಕ್ರಮದಲ್ಲಿ ಕೂಡ ಆರೋಪಿಯಾಗಿದ್ದಾನೆ. ಅನೇಕರಿಗೆ ಅಕ್ರಮವಾಗಿ ಪರೀಕ್ಷೆ ಬರೆಸಿರುವುದು ಬೆಳಕಿಗೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರುದ್ರಗೌಡ ಪಾಟೀಲ್‌ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲು ಸಾಧ್ಯತೆ ಇದೆ. ಈತ ಇದಾಗಲೇ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಇದ್ದಾನೆ. (ದಿಗ್ವಿಜಯ ನ್ಯೂಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net