

ಬೆಂಗಳೂರು: ಪಿಎಸ್ಐ ನೇಮಕಾತಿಗೆ ಸಂಬಂಧಿಸಿದಂತೆ ಅಕ್ರಮ ನಡೆಸಿರುವ ಒಬ್ಬೊಬ್ಬರೇ ಆರೋಪಿಗಳು ಪೊಲೀಸರ ಬಲೆಗೆ ಬೀಳುತ್ತಿದ್ದಾರೆ.
ಈ ಅಕ್ರಮಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ನ ಮೊದಲ ಆರೋಪಿ ಜಾಗೃತ್ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಚನ್ನಪಟ್ಟಣದಲ್ಲಿ ಈತನನ್ನು ಬಂಧಿಸಲಾಗಿದೆ. ಪಿಎಸ್ಐ ಪರೀಕ್ಷೆಯಲ್ಲಿ ನಡೆದ ಅಕ್ರಮ ನೇಮಕಾತಿ ಬಯಲಿಗೆ ಬರುತ್ತಿದ್ದಂತೆಯೇ ಇದರ ವಿರುದ್ಧ ಪ್ರತಿಭಟನೆ ಮಾಡಿದ ಮುಂದಾಳತ್ವವನ್ನೂ ಈತ ವಹಿಸಿದ್ದ ಎನ್ನುವುದು ಪೊಲೀಸ್ ತನಿಖೆಯಿಂದ ಬಯಲಿಗೆ ಬಂದಿದೆ.
ಹಗರಣ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ ಈತನ ಜಾತಕಕ್ಕಾಗಿ ಜಾಲಾಡಿದ್ದರು. ಕೊನೆಗೆ ತಿಳಿದುಬಂದದ್ದು ಏನೆಂದರೆ, ಜಾಗೃತ್, ಮೊದಲ ಹಂತದಲ್ಲೇ ಹಣ ಕೊಟ್ಟು ಒಎಂಆರ್ ಶೀಟ್ ತಿದ್ದಿಸಿರುವುದು ಗೊತ್ತಾಗಿತ್ತು. ಎಫ್ಎಸ್ಎಲ್ ವರದಿಯನ್ವಯ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದ. ಇದಾದ ನಂತರ ತಲೆಮರೆಸಿಕೊಂಡಿದ್ದ.
ತನ್ನನ್ನು ಹಿಡಿಯಲು ಪೊಲೀಸರು ತಂಡ ರಚಿಸಿರುವುದು ತಿಳಿಯುತ್ತಲೇ ಹೈಕೋರ್ಟ್ನಲ್ಲಿ ಎಫ್ಐಆರ್ ವಜಾಕ್ಕೆ ಆಗ್ರಹಿಸಿ ಅರ್ಜಿ ಸಲ್ಲಿಸಿದ್ದ. ಕೇರಳ ಹಾಗೂ ಬೇರೆ ಬೇರೆ ಕಡೆ ತಪ್ಪಿಸಿಕೊಂಡು ತಿರುಗುತ್ತಿದ್ದ. ಈತ ಹಣ ನೀಡಿ ಮಧ್ಯವರ್ತಿ ಹಾಗೂ ಎಫ್ಡಿಎ ಹರ್ಷ ಮೂಲಕ ವ್ಯವಹಾರ ಮಾಡಿರುವುದು ಬೆಳಕಿಗೆ ಬಂದಿದೆ
ಸದ್ಯ ಜಾಗೃತ್ನನ್ನು ಸಿಐಡಿ ಪೊಲೀಸರು ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆದಿದ್ದಾರೆ.