

ಶಿವಮೊಗ್ಗ: ವೃದ್ಧೆಯೊಬ್ಬರು ಮೃತಪಟ್ಟು ಮೂರು ದಿನವಾದರೂ ಅವರ ಅಂತ್ಯ ಸಂಸ್ಕಾರ ನಡೆಸದೆ ರಸ್ತೆಗಾಗಿ ಪಟ್ಟು ಹಿಡಿದು ಕುಟುಂಬಸ್ಥರು ಕುಳಿತಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಗೌತಮಪುರ ಗ್ರಾಮದಲ್ಲಿ ನಡೆದಿದೆ.
ಅಂತ್ಯ ಸಂಸ್ಕಾರಕ್ಕೆ ಶವ ಕೊಂಡೊಯ್ಯಲು ರಸ್ತೆ ಇಲ್ಲದಿರುವುದರಿಂದ ಶವವಿಟ್ಟುಕೊಂಡು ಪ್ರತಿಭಟನೆ ಹಾದಿ ಹಿಡಿದಿದ್ದಾರೆ ಕುಟುಂಬದವರು.
ಗೌತಮಪುರದ ಜನತಾ ಕಾಲನಿಯ ರಾಜಮ್ಮ(70) ಮೂರು ದಿನದ ಹಿಂದೆ ಮೃತಪಟ್ಟಿದ್ದಾರೆ. ಆದರೆ ಅವರ ಶವವನ್ನು ಸ್ಮಾಶನಕ್ಕೆ ಕೊಂಡೊಯ್ಯಲು ರಸ್ತೆಯೇ ಇಲ್ಲ. ಹೀಗಾಗಿ ಮನೆ ಎದುರೇ ಕಳೆದ ಮೂರು ದಿನಗಳಿಂದ ಶವ ಇಟ್ಟುಕೊಂಡು ರಸ್ತೆಗಾಗಿ ಹೋರಾಟ ಆರಂಭಿಸಿದ್ದಾರೆ ಕುಟುಂಬದವರು ಹಾಗೂ ಸಂಬಂಧಿಕರು.
ಮೂರು ದಿನದ ಹಿಂದೆ ರಾಜಮ್ಮ ಮೃತಪಟ್ಟಿರುವುದಿಂದ ಶವ ಈಗಾಗಲೇ ವಾಸನೆ ಬರಲಾರಂಭಿಸಿದೆ. ಶವ ಕೊಳೆತು ನಾರುತ್ತಿದ್ದರೂ, ರಸ್ತೆ ಇಲ್ಲದೇ ಶವ ಸಾಗಿಸುವುದಿಲ್ಲ ಎಂದು ಕುಟುಂಬದವರು ಆಗ್ರಹಿಸುತ್ತಿದ್ದಾರೆ. ‘ಗ್ರಾಮಠಾಣಾ ಜಾಗ ಒತ್ತುವರಿ ಮಾಡಿ ನಮ್ಮ ಮನೆಗೆ ಬರುವ ರಸ್ತೆ ಬಂದ್ ಮಾಡಲಾಗಿದೆ. ಕಳೆದ 24 ವರ್ಷದಿಂದ ಹೋರಾಟ ನಡೆಸುತ್ತಿದ್ದರೂ ಒತ್ತುವರಿ ತೆರವು ಮಾಡಿ ರಸ್ತೆ ಬಿಡಿಸಿಕೊಟ್ಟಿಲ್ಲ. ಇದೀಗ ಶವ ಕೊಂಡೊಯ್ಯಲೂ ರಸ್ತೆಯಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಕುಟುಂಬದವರು.
ಸ್ಥಳಕ್ಕೆ ಸಾಗರ ಗ್ರಾಮಾಂತರ ಠಾಣೆ ಪೊಲೀಸರು, ಗೌತಮಪುರ ಗ್ರಾಮಪಂಚಾಯಿತಿ ಅಧಿಕಾರಿಗಳು ಆಗಮಿಸಿ ಮನವೊಲಿಸುವ ಕೆಲಸ ಮಾಡಿದರೂ ಅವರು ಜಗ್ಗುತ್ತಿಲ್ಲ. ಮೊದಲು ರಸ್ತೆ ಮಾಡಿಕೊಡಿ, ಆಮೇಲೆ ಶವ ಸಂಸ್ಕಾರ ಮಾಡುವುದಾಗಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಗೌತಮಪುರ ಗ್ರಾಮಪಂಚಾಯಿತಿ ವಿಶೇಷ ಸಭೆ ನಡೆಸಲಾಗುತ್ತಿದೆ. ಕಳೆದ 24 ವರ್ಷಗಳಿಂದ ರಸ್ತೆ ಹಾಗೂ ವಿದ್ಯುತ್ ಸಂಪರ್ಕವಿಲ್ಲದೇ ಈ ಭಾಗದಲ್ಲಿ ನಾಲ್ಕು ಕುಟುಂಬಗಳು ನೆಲೆಸಿವೆ. ಇಷ್ಟು ವರ್ಷ ಎಲ್ಲ ರೀತಿಯ ಹೋರಾಟ ನಡೆಸಿದ್ದರೂ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಪಡೆಯಲು ವಿಫಲವಾಗಿದ್ದವು. ಆದ್ದರಿಂದ ಈಗ ಪಟ್ಟುಹಿಡಿಯಲಾಗಿದೆ.