

ಬೆಂಗಳೂರು: ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಸಿಪಿ ಕಿಶೋರ್ ಭರಣಿ ಕ್ಷಮೆಯಾಚನೆಗೆ ಆಗ್ರಹಿಸಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೆಳ್ಳಂದೂರು ಪೊಲೀಸ್ ಸ್ಟೇಷನ್ ಎದುರು ಪ್ರತಿಭಟನೆ ನಡೆಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ, “ರಸ್ತೆ ಗುಂಡಿಗೆ ಬಲಿಯಾದ ಶಿಕ್ಷಕಿ ಶರ್ಮಿಳಾರವರ ಆತ್ಮಕ್ಕೆ ಶಾಂತಿ ಸಿಗಲೆಂದು ಮೊಂಬತ್ತಿ ಹಿಡಿದು ಮೆರವಣಿಗೆ ಸಾಗುತ್ತಿದ್ದ ಎಎಪಿ ಕಾರ್ಯಕರ್ತರನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದರು. ಈ ವೇಳೆ ಎಸಿಪಿ ಕಿಶೋರ್ ಭರಣಿಯವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿದ್ದಾರೆ. ಇದನ್ನು ಖಂಡಿಸಿ ನಾವು ಗುರುವಾರ ಬೆಳಗ್ಗೆಯಿಂದ ಧರಣಿ ನಡೆಸುತ್ತಿದ್ದರೂ ಸ್ಥಳಕ್ಕೆ ಆಗಮಿಸದೇ ತಲೆಮರೆಸಿಕೊಂಡಿದ್ದಾರೆ. ಅವರು ಕ್ಷಮೆ ಕೇಳುವ ತನಕ ಅಹೋರಾತ್ರಿ ಧರಣಿ ಮಾಡಲೂ ನಾವು ಸಿದ್ಧವಿದ್ದೇವೆ” ಎಂದು ಎಚ್ಚರಿಕೆ ನೀಡಿದರು.
ಎಎಪಿಯ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಎಚ್.ಡಿ.ಬಸವರಾಜು ಮಾತನಾಡಿ, “ಆಮ್ ಆದ್ಮಿ ಪಾರ್ಟಿಯ ಮುಖಂಡರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸುವ ಪೊಲೀಸರು, ಇನ್ನು ಜನಸಾಮಾನ್ಯರ ಜೊತೆಗೆ ಹೇಗೆ ವರ್ತಿಸಬಹುದು ಎಂದು ಯೋಚಿಸಿದರೆ ಆತಂಕವಾಗುತ್ತದೆ. ಕಿಶೋರ್ ಧರಣಿಯವರಂತಹ ಕೆಲವು ಪೊಲೀಸರಿಂದ ಇಡೀ ಪೊಲೀಸ್ ಇಲಾಖೆಗೆ ಕಳಂಕ ಬರುತ್ತಿದೆ. ಮೊಂಬತ್ತಿ ಹಿಡಿದು ಆತ್ಮಕ್ಕೆ ಶಾಂತಿ ಕೋರಿದ ಎಎಪಿ ಕಾರ್ಯಕರ್ತರನ್ನು ನಿಂದಿಸುವ ಬದಲು ಶರ್ಮಿಳಾ ಸಾವಿಗೆ ಕಾರಣರಾದವರನ್ನು ಬಂಧಿಸಿ ಇದೇ ರೀತಿ ನಿಂದಿಸಲಿ. ರಸ್ತೆ ಕಾಮಗಾರಿಯ ಕೋಟಿಗಟ್ಟಲೆ ಹಣವನ್ನು ಜೇಬಿಗೆ ಇಳಿಸಿಕೊಂಡು ಗುಂಡಿಗೆ ಕಾರಣರಾದವರ ವಿರುದ್ಧ ದರ್ಪ ತೋರಿಸಲಿ” ಎಂದು ಸವಾಲು ಹಾಕಿದರು.
ಆಮ್ ಆದ್ಮಿ ಪಾರ್ಟಿಯ ಮುಖಂಡರಾದ ನಂಜಪ್ಪ ಕಾಳೇಗೌಡ, ಮೋಹನ್ ದಾಸರಿ, ಮಂಜುನಾಥ್ ಸ್ವಾಮಿ, ಕುಶಲ ಸ್ವಾಮಿ, ಸತೀಶ್ ಗೌಡ, ರಾಜಶೇಖರ್ ದೊಡ್ಡಣ್ಣ, ಚೆನ್ನಪ್ಪಗೌಡ. ಜಗದೀಶ್ ಸದಂ, ಅಶೋಕ್ ಮೃತ್ಯುಂಜಯ, ಸೀತಾರಾಮ್ ಗುಂಡಪ್ಪ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.