ಟಾರ್ಗೆಟ್ ಮಾಡಲು ಪ್ರತಾಪ್ ಸಿಂಹ ನ್ಯಾಷನಲ್ ಲೀಡರಾ?: ಡಾ.ಯತೀಂದ್ರ ಸಿದ್ದರಾಮಯ್ಯ

yathindra siddaramaiah
Published on

ಮೈಸೂರು: ಟಾರ್ಗೆಟ್ ಮಾಡಲು ಪ್ರತಾಪ್ ಸಿಂಹ ಅವರೇನು ನ್ಯಾಷನಲ್ ಲೀಡರ್ ಅಲ್ಲ ಎಂದು ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳುತ್ತಿರುವ ಸಂಸದ ಪ್ರತಾಪ್ ಸಿಂಹ ತಮ್ಮನ್ನು ತಾವು ನ್ಯಾಷನಲ್ ಲೀಡರ್ ಎಂದುಕೊಂಡಿದ್ದಾರಾ ? ಎಂದು ಪ್ರಶ್ನಿಸಿದರು. ತಾವು ನ್ಯಾಷನಲ್ ಲೀಡರ್ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ ಅಷ್ಟೆ ಎಂದು ಟೀಕಿಸಿದರು.

ನಮ್ಮ ತಂದೆ ಯಾವತ್ತು ಟಾರ್ಗೆಟ್ ರಾಜಕಾರಣ ಮಾಡಿಲ್ಲ. ತಮಗೆ ರಾಜಕೀಯವಾಗಿ ಅನೇಕ ಬಾರಿ ಅನ್ಯಾಯವಾಗಿದ್ದರೂ ಅನ್ಯಾಯ ಮಾಡಿದ್ದವರ ವಿರುದ್ಧ ಅವರು ರಾಜಕಾರಣ ಮಾಡಲಿಲ್ಲ. ಅಂಥದರಲ್ಲಿ ಪ್ರತಾಪಸಿಂಹನನ್ನ ಯಾಕೆ ತಂದೆಯವರು ಟಾರ್ಗೆಟ್ ಮಾಡುತ್ತಾರೆ. ಅವರ ತಮ್ಮ ತಪ್ಪು ಮಾಡಿದ್ದಾರೆ ಅದಕ್ಕಾಗಿ ಕೇಸ್ ಆಗಿದೆ ಅಷ್ಟೇ. ಇದರಲ್ಲಿ ಟಾರ್ಗೆಟ್ ಎಲ್ಲಿಂದ ಬಂತು. ತಮ್ಮನ ತಪ್ಪು ಮುಚ್ಚಿಕೊಳ್ಳಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎಂದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ನಾನು ಟಿಕೆಟ್ ಕೇಳಿಲ್ಲ. ಪಕ್ಷ ನಾನೇ ಸ್ಪರ್ಧಿಸಬೇಕು ಎಂದರೆ ಪಕ್ಷದ ತೀರ್ಮಾನಕ್ಕೆ ಬದ್ಧ. ನಾನು ಇವತ್ತಿನವರೆಗೆ ಆ ವಿಚಾರದಲ್ಲಿ ಯಾವ ಯೋಚನೆ ಮಾಡಿಲ್ಲ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರು ಅವರನ್ನು ಗೆಲ್ಲಿಸುವುದು ನಮ್ಮ ಜವಾಬ್ದಾರಿ. ಈ ದೃಷ್ಟಿಯಿಂದ ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net