

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬೆಂಬಲ ಮುಂದುವರಿಸಿರುವ ಮಠಾಧೀಶರು, ಬಿಎಸ್ವೈ ಅವರನ್ನು ಕೆಳಗಿಳಿಸಿದಲ್ಲಿ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಸಿಗಲಿದೆ ಎಂದು ಬಿಜೆಪಿ ಹೈಕಮಾಂಡ್ಗೆ ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ.
ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಮಠಾಧಿಪತಿಗಳ ಮಹಾಸಮಾವೇಶದಲ್ಲಿ ಈ ಒಕ್ಕೊರಲ ಧ್ವನಿ ಹೊರಹೊಮ್ಮಿತು. ಯಡಿಯೂರಪ್ಪ ಒಂದು ಜನಾಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಜಾತ್ಯತೀತ ವ್ಯಕ್ತಿ. ಸಮಾಜದ ಧೀಶಕ್ತಿ. ಒಳ್ಳೆಯ ಕೆಲಸ ಮಾಡುತ್ತಿರುವ ಅವರು ಸರ್ಕಾರ ರಚನೆಗೆ ಬೇಕು, ಪೂರ್ಣ ಪ್ರಮಾಣದ ಅಧಿಕಾರ ನಡೆಸಲು ಬೇಡವೇ?, ಯಡಿಯೂರಪ್ಪ ಅವರನ್ನು ಅವಮಾನಿಸುವುದನ್ನು, ಕಿರುಕುಳ ಕೊಡುವುದನ್ನು ನೋಡಿಕೊಂಡು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವೇ ಎಂಬ ಗುಡುಗು ಸಮಾವೇಶದಲ್ಲಿ ಕೇಳಿಬಂತು.
ಕಾಂಗ್ರೆಸ್ನಲ್ಲಿ ವೀರಶೈವ-ಲಿಂಗಾಯತ ನಾಯಕರು ಇದ್ದಾಗ ನಮ್ಮ ಸಮುದಾಯ ಬೆಂಬಲ ಕೊಟ್ಟಿತ್ತು. ನಮ್ಮ ಸಮಾಜಕ್ಕೆ ಅನ್ಯಾಯ ಆಗಿದೆ. ನಮ್ಮ ಸಮಾಜದ ನಾಯಕ ಸಿಎಂ ಸ್ಥಾನದಲ್ಲಿದ್ದಾರೆ ಎಂಬ ಕಾರಣಕ್ಕೆ ಬೆಂಬಲ ಕೊಟ್ಟಿದ್ದೇವೆ. ಯಡಿಯೂರಪ್ಪ ಅವರಿಗೆ ವಯಸ್ಸು ಆಗಿದೆ ಎನ್ನುತ್ತಾರೆ. ಕಳೆದ ಬಾರಿ ಪ್ರವಾಹ ಬಂದಾಗ ಒಬ್ಬರೇ ಪ್ರವಾಸ ಮಾಡಿ ಸ್ಪಂದಿಸಿದ್ದರು. ಬಿಜೆಪಿಯಲ್ಲಿ ಕೆಲವರು ಪಕ್ಷವನ್ನು ಹಾಳು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ನಾಯಕತ್ವ ಬದಲಾವಣೆ ಮಾಡಿದರೆ ಮುಂಬರುವ ದಿನಗಳಲ್ಲಿ ಉತ್ತರ ಸಿಗಲಿದೆ ಎಂದು ಎಚ್ಚರಿಸಿದರು.
ಏಕತೆಗಾಗಿ ಸೇರಿದ್ದೇವೆ: ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಬೃಹನ್ಮಠದ ಶ್ರೀ ಮುರುಘಾ ಶರಣರು ಮಾತನಾಡಿ, ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ. ಇದಕ್ಕೆ ಪರಿಹಾರ ಹೈಕಮಾಂಡ್ಗೆ ಬಿಟ್ಟ ವಿಚಾರ. ಇದು ನಾವು ನೀವು ಸೇರಿ ಮಾಡುವಂತಹ ಕೆಲಸವಲ್ಲ. ಸಂವಿಧಾನ ನಮಗೆ ಆ ಅಧಿಕಾರವನ್ನೂ ಕೊಟ್ಟಿಲ್ಲ. ನಮ್ಮ ಬೇಡಿಕೆ, ಅನಿಸಿಕೆಗಳನ್ನು ಹೈಕಮಾಂಡ್ ಮುಂದೆ ಹೇಳಬೇಕು ಎಂದರು. ಸಾಮಾಜಿಕ, ಧಾರ್ವಿುಕ ಏಕತೆ ತೋರಿಸಲು ನಾವಿಲ್ಲಿ ಸೇರಿದ್ದೇವೆ. ವೀರಶೈವ-ಲಿಂಗಾಯತರಲ್ಲಿ ಏಕತೆ, ಸಮಗ್ರತೆ, ಉದಾತ್ತ ತತ್ವ ಬೇಕು ಎನ್ನುವವರು ಬಂದಿದ್ದೇವೆ. ರಾಜ್ಯಕ್ಕೆ, ದೇಶಕ್ಕೆ ಸಂದೇಶ ಕಳುಹಿಸಿದ್ದೇವೆ. ಸದು ದ್ದೇಶದ ಸಲುವಾಗಿ ನಾವಿಲ್ಲಿ ಸೇರಿದ್ದೇವೆ ಎಂದರು.