

ಕೋಲಾರ: ಬಹುಭಾಷಾ ಗಾಯಕ, ನಟ ಎಸ್.ಪಿ.ಬಾಲಸುಬ್ರಮಣ್ಯಂ ನಿಧನಕ್ಕೆ ಸಂಗೀತ ಪ್ರಿಯರು ಕಂಬನಿ ಮಿಡಿದಿದ್ದಾರೆ.
ಕೋಟ್ಯಂತರ ಸಂಗೀತ ಅಭಿಮಾನಿಗಳನ್ನು ಸಂಪಾದಿಸಿದ್ದ ಎಸ್‌ಪಿಬಿ ಜಿಲ್ಲೆಯ ತ್ರಿಭಾಷಾ ಜನರ ಅಭಿಮಾನಕ್ಕೆ ಪಾತ್ರರಾಗಿದ್ದರು, ಜಿಲ್ಲೆಗೆ ಮೂರ‌್ನಾಲ್ಕು ಬಾರಿ ಭೇಟಿ ನೀಡಿ ಸಂಗೀತದ ರಸದೌತಣ ನೀಡಿದ್ದರು ಎಂದು ಅಭಿಮಾನಿಗಳು ನೆನಪು ಮಾಡಿಕೊಂಡಿದ್ದಾರೆ.
ಜಿಲ್ಲೆಯ ಹಿರಿಯ ಗಾಯಕ, ಕರ್ನಾಟಕ ಜನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ಎಸ್‌ಪಿಬಿ ಅಗಲಿಕೆಯಿಂದ ಸಂಗೀತ ಕ್ಷೇತ್ರಕ್ಕೆ ನಷ್ಟವಾಗಿದೆ, ಮನುಷ್ಯ ಸಂಬಂಧಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಮಹಾನ್ ಚೇತನ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಬಂಗಾರಪೇಟೆಯಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಕೋಲಾರ ಜಿಲ್ಲೆ ನೀರಿನ ಬವಣೆ, ರೈತರ ಕಷ್ಟ ಕೇಳಿ ಮರುಕ ವ್ಯಕ್ತಪಡಿಸಿದ್ದರು ಎಂದು ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ ಹೇಳಿದರೆ, ಎದೆ ತುಂಬಿ ಹಾಡಿದೆನು ಕಾರ್ಯಕ್ರಮದಲ್ಲಿ ಎಸ್‌ಪಿಬಿ ಜತೆ ತೀರ್ಪುಗಾರನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು, ತೆಲುಗು ಭಾಷಿಗರಾಗಿದ್ದರೂ ಕನ್ನಡ ಭಾಷೆ ಮತ್ತು ನಾಡಿನ ಜನರ ಮೇಲೆ ಅಪಾರ ಪ್ರೀತಿ ಹೊಂದಿದ್ದರು ಎಂದು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಆರ್.ಜ್ಞಾನಮೂರ್ತಿ ನೆನೆದಿದ್ದಾರೆ.
ಮರು ಜನ್ಮ ಎಂಬುದಿದ್ದರೆ ಕನ್ನಡ ನಾಡಿನಲ್ಲಿ ಹುಟ್ಟುವೆ ಎಂದು ಎಸ್‌ಪಿಬಿ ಹೇಳಿದ್ದನ್ನು ಸ್ಮರಿಸಿಕೊಂಡಿರುವ ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ತ್ಯಾಗರಾಜು, ಮಹಾನ್ ಗಾಯಕನ ಮಾತು ನಿಜವಾಗಲಿ, ಅವರು ಕನ್ನಡಿಗರಾಗಲಿ ಪುರ್ನಜನ್ಮ ಪಡೆಯಲಿ ಎಂದು ಆಶಿಸಿದ್ದಾರೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮನ್ವಂತರ ಜನ ಸೇವಾ ಟ್ರಸ್ಟ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಮನ್ವಂತರ ಪ್ರಕಾಶನ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಮಾರ್ಗದರ್ಶಕ ಎಚ್.ಎ.ಪುರುಷೋತ್ತಮ್, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜು, ರೈತ ಸಂಘದ ಮುಖಂಡ ಕೆ.ನಾರಾಯಣಗೌಡ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಸೇರಿದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಕರೊನಾ ಇಲ್ಲದಿದ್ದಲ್ಲಿ ಮುಂದಿನ ವರ್ಷ ಎಸ್‌ಪಿಬಿ ಗಾಯನ ಕಾರ್ಯಕ್ರಮ ವ್ಯವಸ್ಥೆ ಮಾಡುತ್ತಿದ್ದೆವು, ಎರಡು ಬಾರಿ ನಮ್ಮ ಆಹ್ವಾನ ಒಪ್ಪಿ ಕೋಲಾರಕ್ಕೆ ಬಂದಿದ್ದರು, ಸರಳ-ಸಜ್ಜನಿಕೆಯ ವ್ಯಕ್ತಿ, ದಣಿವಿಲ್ಲದೆ 50 ವರ್ಷ ಸುದೀರ್ಘ ಸಂಗೀತ ಸೇವೆ ಸಲ್ಲಿಸಿದ ಮಹಾನ್ ಸಾಧಕನನ್ನು ಕಳೆದುಕೊಂಡಿರುವುದು ದುಃಖವನ್ನುಂಟು ಮಾಡಿದೆ. ಕುರುಬರಪೇಟೆ ವೆಂಕಟೇಶ್, ಖಜಾಂಚಿ, ಕ್ರೀಡಾ ಅಭಿವೃದ್ಧಿ ಅಕಾಡೆಮಿ, ಕೋಲಾರ. ಎಸ್.ಪಿ.ಬಿ. ಗಾಯಕರಾಗಿ ದೊಡ್ಡ ಸಾಧನೆ ಮಾಡಿದ್ದಾರೆ, ಕನ್ನಡ ಭಾಷೆ ಮೇಲೆ ಅಪಾರ ಪ್ರೀತಿ ಹಾಗೂ ಪಾಂಡಿತ್ಯ ಹೊಂದಿದ್ದರು. ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು, ಗುಣಮುಖರಾಗಿ ಮತ್ತೆ ಗಾನ ಲೋಕಕ್ಕೆ ಮರಳುವ ವಿಶ್ವಾಸವಿತ್ತು, ವಿಧಿ ನಮ್ಮ ಆಸೆ ಹುಸಿಗೊಳಿಸಿದೆ. ಅವರ ಹಾಡುಗಳು ಎಂದೂ ಮರೆಯದ ಭಾವ ತರಂಗಗಳು ಎಂದರೆ ತಪ್ಪಾಗಲಾರದು. ನಾಗಾನಂದ ಕೆಂಪರಾಜು, ಜಿಲ್ಲಾಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್, ಕೋಲಾರ