ಇಂದಿನಿಂದ ಆನ್‌ಲೈನ್ ಗೇಮ್‌ ಬ್ಯಾನ್‌- ಸೆಲೆಬ್ರಿಟಿಗಳು ಕಾಣಿಸಿಕೊಳ್ತಿದ್ದ ಆ್ಯಪ್‌ಗಳೂ ಕ್ಲೋಸ್‌!

onlinegame
Published on

ಬೆಂಗಳೂರು: ಆನ್‌ಲೈನ್‌ ಗೇಮ್‌ಗಳ ಮೂಲಕ ಜೂಜಾಟಕ್ಕೆ ಇಳಿಯುತ್ತಿದ್ದ ಜನರಿಗೆ ರಾಜ್ಯ ಸರ್ಕಾರದಿಂದ ಶಾಕಿಂಗ್‌ ನ್ಯೂಸ್‌ ಬಂದಿದ್ದು, ಕರ್ನಾಟಕದಲ್ಲಿ ಇಂದಿನಿಂದ ಆನ್‌ಲೈನ್‌ ಗೇಮ್‌ಗಳನ್ನು ನಿಷೇಧಿಸಲಾಗಿದೆ. ಈ ಕುರಿತು ರಾಜ್ಯ ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ. ರಾಜ್ಯದಲ್ಲಿ ಪೊಲೀಸ್ ಕಾಯ್ದೆಗೆ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ತಿದ್ದುಪಡಿ ತರಲಾಗಿತ್ತು. ಇದರಲ್ಲಿ ಜೂಜಾಟಕ್ಕೂ ಬ್ರೇಕ್ ಹಾಕೋ ಅಂಶಗಳು ಸೇರಿದ್ದವು. ಅದರ ಅನ್ವಯ ಇದೀಗ ಗೇಮ್‌ ಬ್ಯಾನ್‌ ಮಾಡಲಾಗಿದೆ.

ಇಂದಿನಿಂದ ಡ್ರೀಮ್ 11 ಹಾಗೂ ಫಸ್ಟ್ ಗೇಮ್, ಗೇಮ್​ಜಿ ಎಂಬ ಪ್ರಸಿದ್ಧ ಆನ್‌ಲೈನ್‌ ಜೂಜಾಟದ ಆ್ಯಪ್‌ ಸೇರಿದಂತೆ ಹಲವು ಫ್ಯಾಂಟಸಿ ಗೇಮ್ ಆ್ಯಪ್‌ಗಳನ್ನು ರಾಜ್ಯ ಸರ್ಕಾರ ನಿಷೇಧಿಸಿದೆ.  ಅಂದರೆ ಇನ್ನು ಮುಂದೆ ಆನ್‌ಲೈನ್‌ ಮೂಲಕ ಗೇಮ್‌ ಆಡುವುದು, ಬೆಟ್ಟಿಂಗ್‌ ಕಟ್ಟುವುದು, ಟೋಕನ್‌ ಮೂಲಕ ಹಣದ ಆಟವಾಡುವುದು, ಎಲೆಕ್ಟ್ರಾನಿಕ್‌ ಮನಿ ಮೂಲಕ ಅಥವಾ ಇನ್ನಿತರ ಸಾಧನಗಳಿಂದ ಆನ್‌ಲೈನ್‌ ಗೇಮ್‌ ಮೂಲಕ ಹಣದ ವರ್ಗಾವಣೆ ಮಾಡುವುದಕ್ಕೆ ನಿಷೇಧ ಹೇರಲಾಗಿದೆ.

ಆನ್​ಲೈನ್ ಜೂಜನ್ನು ಪ್ರಸ್ತುತಪಡಿಸುವ ಈ ಆ್ಯಪ್‌ಗಳು ಇವೆಲ್ಲವೂ ಕೌಶಲಯುತ ಆಟಗಳು ಎಂದು ಕರೆಯುತ್ತಿದ್ದವು. ಸಾಲದು ಎಂಬುದಕ್ಕೆ ಕೆಲ ಸಿನಿ ತಾರೆಯರು, ಕ್ರಿಕೆಟ್‌ ತಾರೆಯರು ಇದರ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗಾಗಲೇ ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಆನ್​ಲೈನ್ ಜೂಜನ್ನು ನಿಷೇಧಿಸಲಾಗಿದ್ದು ಕರ್ನಾಟಕದಲ್ಲಿಯೂ ಇದರ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಇದೀಗ ಆದೇಶ ಹೊರಬಂದಿದೆ.

ಕರ್ನಾಟಕದ ಆನ್​ಲೈನ್ ಜೂಜು ನಿಷೇಧ ಕಾಯ್ದೆಯ ಅನ್ವಯ, ‘ಕೌಶಲಯುತ ಆಟಗಳೂ ಸೇರಿದಂತೆ, ಆನ್​ಲೈನ್ ಗೇಮ್​ಗಳಲ್ಲಿ, ಫಲಿತಾಂಶ ಖಚಿತವಾಗಿರದ ಆಟಗಳಲ್ಲಿ ಹಣವನ್ನು ಒಡ್ಡುವುದು ಅಪರಾಧ’ ಎಂದು ಕಾಯ್ದೆ ಹೇಳುತ್ತದೆ.

ಇನ್ನು ಕಾನೂನು ಮೀರಿ ಆಟವಾಡಿದರೆ, ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಜತೆಗೆ, ಒಂದು ಲಕ್ಷ ರೂಪಾಯಿವರೆಗೆ ದಂಡವನ್ನೂ ವಿಧಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net