

ಬೆಂಗಳೂರು: ನಾಡಗೀತೆ ತಿರುಚಿರುವ ಆರೋಪ ಹೊತ್ತ ರೋಹಿತ್ ಚಕ್ರತೀರ್ಥ ವಿರುದ್ಧ ಸೈಬರ್ ದೂರು ದಾಖಲಿಸಬೇಕೆಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸರ್ಕಾರಕ್ಕೆ ಬರೆದ ಪತ್ರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆರ್.ಟಿ ನಗರದ ತಮ್ಮ ನಿವಾಸದ ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಈ ಪತ್ರವೂ ಸೇರಿ ಪಠ್ಯಾಂಶಗಳ ವಿವಾದದ ಬಗ್ಗೆಯೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಜತೆಗೆ ಚರ್ಚಿಸಿ ಕ್ರಮವಹಿಸುವೆ ಎಂದರು.
ಇಂದು ತೀರ್ಮಾನ
ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಬಿಜೆಪಿ ವರಿಷ್ಠರು ಇಂದು ತೀರ್ಮಾನಿಸಲಿದ್ದಾರೆ. ಪಕ್ಷದ ಸಂಖ್ಯಾಬಲದ ಪ್ರಕಾರ ಎರಡು ಸ್ಥಾನಗಳನ್ನು ಗೆಲ್ಲುತ್ತೇವೆ. ಹೆಚ್ಚುವರಿಯಾಗಿ ಉಳಿಯುವ ಮತಗಳನ್ನು ಬಳಸಿಕೊಳ್ಳಲು ಮೂರನೇ ಅಭ್ಯರ್ಥಿ ಕಣಕ್ಕಿಳಿಸುವ ಕುರಿತು ನಿರ್ಧರಿಸಲಿದ್ದಾರೆ. ಯಾವುದಾದರೂ ಎರಡು ಪಕ್ಷಗಳು ಜೈಜೋಡಿಸಬೇಕಾಗುತ್ತದೆ ಎಂಬ ಅರಿವಿದ್ದು, ಪರಿಸ್ಥಿತಿ ಅವಲೋಕಿಸಿ ಸೂಕ್ತ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ವರಿಷ್ಠರ ವಿವೇಚನೆಗೆ ಬಿಟ್ಟದ್ದು ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.