ಕರ್ನಾಟಕ ಹೈಕೋರ್ಟ್‌ಗೆ ಐವರು ಹೊಸ ನ್ಯಾಯಮೂರ್ತಿಗಳ ನೇಮಕ; 49ಕ್ಕೇರಿದ ಜಡ್ಜ್​ಗಳ ಸಂಖ್ಯೆ

High Court
Published on

ಬೆಂಗಳೂರು: ಹೈಕೋರ್ಟ್‌ನ ಹಾಲಿ ರಿಜಿಸ್ಟ್ರಾರ್ ಜನರಲ್ ಟಿ.ಜಿ ಶಿವಶಂಕರೇಗೌಡ ಸೇರಿ ಐವರು ನ್ಯಾಯಾಂಗ ಅಧಿಕಾರಿಗಳನ್ನು ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಅನಿಲ್ ಭೀಮಸೇನ್ ಕಟ್ಟಿ, ಗುರುಸಿದ್ಧಯ್ಯ ಬಸವರಾಜ, ಚಂದ್ರಶೇಖರ್ ಮೃತ್ಯುಂಜಯ ಜೋಷಿ, ಉಮೇಶ್ ಮಂಜುನಾಥ್ ಭಟ್ ಅಡಿಗ ಹಾಗೂ ತಲಕಾಡು ಗಿರಿಗೌಡ ಶಿವಶಂಕರೇಗೌಡ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಪದನ್ನೋತಿ ನೀಡಲು ಜು.19ರಂದು ನಡೆದ ಸಭೆಯಲ್ಲಿ ಸುಪ್ರೀಂಕೋರ್ಟ್ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ಸಂವಿಧಾನದ ಪರಿಚ್ಛೇದ 224ರ ಕಲಂ (1)ರ ಅಡಿ ಪ್ರದತ್ತವಾದ ಅಧಿಕಾರ ಬಳಸಿ ರಾಷ್ಟ್ರಪತಿಗಳು ಈ ಐವರನ್ನೂ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಿ ಮಾಡಿದ್ದಾರೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ಶುಕ್ರವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ರಾಜ್ಯ ಹೈಕೋರ್ಟ್‌ಗೆ 62 ನ್ಯಾಯಮೂರ್ತಿಗಳ ಹುದ್ದೆ ಮಂಜೂರಾಗಿದ್ದು, 2022ರ ಆ.10ರಂತೆ 44 ನ್ಯಾಯಮೂರ್ತಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಐವರು ಹೊಸ ನ್ಯಾಯಮೂರ್ತಿಗಳ ಸೇರ್ಪಡೆಯಿಂದ ಈ ಸಂಖ್ಯೆ 49ಕ್ಕೆ ಏರಿಕೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net