

ಬೆಂಗಳೂರು: ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಅವರೇ ನಾಡಗೀತೆಯನ್ನು ತಿರುಚಿರುವುದಾಗಿ ಕಾಂಗ್ರೆಸ್ಸಿಗರು ಸೇರಿದಂತೆ ಕೆಲವರು ಭಾರಿ ಪ್ರತಿಭಟನೆಯಲ್ಲಿ ತೊಡಗಿದ್ದು, ಇಂದು ಕೂಡ ಚಕ್ರತೀರ್ಥ ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿವೆ.
2017ರಲ್ಲಿ ಇವರು ನಾಡಗೀತೆಯನ್ನು ತಿರುಚಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು ಎಂಬುದು ಆರೋಪ. ಆದರೆ ಈ ಕುರಿತು ಚಕ್ರತೀರ್ಥ ಅವರು ಇದಾಗಲೇ ಸಾಕಷ್ಟು ಬಾರಿ ಸ್ಪಷ್ಟನೆಯನ್ನೂ ನೀಡಿದ್ದಾರೆ. ಅದೇನೆಂದರೆ, ಈ ನಾಡಗೀತೆಯನ್ನು ತಾನು ಬರೆದು ಪೋಸ್ಟ್ ಮಾಡಿದ್ದಲ್ಲ, ಬದಲಿಗೆ ವಾಟ್ಸ್ಆ್ಯಪ್ನಲ್ಲಿ ಬಂದಿರುವುದನ್ನೇ ನಾನು ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದು, ಅದರ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಕೂಡ ಮಾಡಿದ್ದೆ, ಇದು ವಾಟ್ಸ್ಆ್ಯಪ್ನಲ್ಲಿ ಬಂದಿರುವ ಗೀತೆ ಎಂದು ಅಲ್ಲಿಯೇ ಬರೆದಿದ್ದೆ. ಎಲ್ಲಾ ಅರಿವಿದ್ದರೂ ದುರುದ್ದೇಶಪೂರ್ವಕವಾಗಿ ನನ್ನ ಹೆಸರನ್ನು ತರಲಾಗುತ್ತಿದೆ ಎಂದು ಹೇಳಿದ್ದರು. ಆದರೂ ಪ್ರತಿಭಟನೆ ಮಾತ್ರ ಇಂದಿಗೂ ಮುಂದುವರೆದಿದೆ.
ಇದೀಗ ಈ ಪ್ರಕರಣಕ್ಕೆ ಭಾರಿ ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೆ ನಾಡಗೀತೆಯಲ್ಲಿನ ಸಾಲುಗಳನ್ನು ಅಸಂಬದ್ಧ ಅರ್ಥ ಬರುವಂತೆ ತಿರುಚಿ, ರಾಷ್ಟ್ರಕವಿ ಕುವೆಂಪು ಮತ್ತು ಕನ್ನಡಿಗರ ಭಾವನೆಗಳಿಗೆ ಹಾಗೂ ನಾಡಗೀತೆಯ ಪಾವಿತ್ರ್ಯತೆಗೆ ಧಕ್ಕೆ ತಂದಿರುವ ಮೂಲ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಪಠ್ಯಪುಸ್ತಕಗಳ ಸಂಘದ ವ್ಯವಸ್ಥಾಪಕ ನಿರ್ದೇಶಕ ಎಂ.ಪಿ. ಮಾದೇಗೌಡ ಅವರು ಸಿಐಡಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ರೋಹಿತ್ ಚಕ್ರತೀರ್ಥ ಅವರ ಫೇಸ್ಬುಕ್ ಖಾತೆಯ ಬೆನ್ನಟ್ಟಿ ಹೋಗಿದ್ದಾರೆ. ಇದನ್ನು ಬರೆದ ಮೂಲ ಬರಹಗಾರರು ಸಿಗಲಿದ್ದಾರೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಸಿದ್ದರಾಮಯ್ಯ ಅವಧಿಯಲ್ಲಿನ ನಾಡಗೀತೆ:
ಅಷ್ಟಕ್ಕೂ ನಾಡಗೀತೆಯಲ್ಲಿ ತಿರುಚಿದ್ದೇನು? ಏಕೆ? ಎಂಬ ಬಗ್ಗೆ ಹಲವರಲ್ಲಿ ಪ್ರಶ್ನೆ ಕಾಡುತ್ತಿದೆ. ಆಗಿದ್ದೇನೆಂದರೆ 2017ರಲ್ಲಿ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಸಚಿವರೊಬ್ಬರು ‘ಕನ್ನಡ ಶಾಲೆಗಳಲ್ಲಿ ಆರೇಬಿಕ್ ಭಾಷೆ ಕಲಿಸುತ್ತೇವೆ ಎಂಬ ಹೇಳಿಕೆ ಕೊಟ್ಟಿದ್ದರು.
ಇದರ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡಿಗರು ಈ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಆಕ್ರೋಶ ಹೊರಹಾಕಿದ್ದರು. ಈ ಆಕ್ರೋಶದ ಭಾಗವಾಗಿ ಯಾರೋ ಒಬ್ಬ ಕನ್ನಡಿಗರು ನಾಡಗೀತೆಯ ಧಾಟಿಯಲ್ಲಿ ಕವಿತೆ ಬರೆದಿದ್ದರು. ಅದರಲ್ಲಿ ಅವರು, ಜೈ ಕಾಂಗ್ರೆಸ್ ಜನನಿಯ ತನುಜಾತೆ ಜಯ ಹೇ ಅರೇಬಿಕ್ ಮಾತೆ ಎಂದು ಬರೆದಿದ್ದರು. ಇದು ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಭಾರಿ ಶೇರ್ ಆಗತೊಡಗಿತ್ತು. ಇದನ್ನೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದ ಚಕ್ರತೀರ್ಥ ಅವರು, ಇದು ವಾಟ್ಸ್ಆ್ಯಪ್ನಲ್ಲಿ ಬಂದಿರುವ ಗೀತೆ ಎಂದು ಬರೆದುಕೊಂಡಿದ್ದರು.
ಚಕ್ರತೀರ್ಥ ಅವರ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಸ್ಪಷ್ಟನೆ ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, 2017ರಲ್ಲೇ ತನಿಖೆ ನಡೆಸಿದ್ದ ಪೊಲೀಸರು ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಈ ಕೃತ್ಯ ಎಸಗಿದ ಮೂಲ ವ್ಯಕ್ತಿಯನ್ನು ಪತ್ತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದೇವೆ ಎಂದಿದ್ದಾರೆ.