ಬೆಸ್ಕಾಂ ಎಇಇಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ತರಾಟೆ

20 Bpt 2
Published on

ಬಂಗಾರಪೇಟೆ: ತಾಲೂಕಿನ 3 ಸ್ಥಳಗಳಲ್ಲಿ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಗೆ ಮಂಜೂರಾತಿ ನೀಡಿದ್ದರೂ ಈವರೆಗೆ ಕಾಮಗಾರಿ ನಡೆಸದೆ ಇರುವುದು ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದು ಬೆಸ್ಕಾಂ ಎಇಇ ರಾಮಕೃಷ್ಣಪ್ಪ ಅವರನ್ನು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತರಾಟೆಗೆ ತೆಗೆದುಕೊಂಡರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಾಮಾನ್ಯ ಸಭೆ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ವಾತನಾಡಿ, ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಾಲೂಕಿನ ಹುದುಕುಳ, ಹುನ್ಕುಂದ ಮತ್ತು ತೊಪ್ಪನಹಳ್ಳಿಯಲ್ಲಿ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಗೆ ಅನುಮೋದನೆ ಪಡೆಯಲಾಗಿತ್ತು. ಮಂಜೂರಾತಿ ಪಡೆದು ವರ್ಷ ಕಳೆದರೂ ಈ ವಿಚಾರವಾಗಿ ಭೇಟಿ ವಾಡಿ ಚರ್ಚೆ ನಡೆಸಿದ್ದೀರಾ ಎಂದು ಎಇಇಗೆ ಪ್ರಶ್ನಿಸಿದರು.

ಸರ್ಕಾರಿ ಜಾಗ ಲಭ್ಯವಿಲ್ಲದೇ ಇರುವುದರಿಂದ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗಲಿಲ್ಲ ಎಂದು ಎಇಇ ಉತ್ತರಿಸಿದ್ದಕ್ಕೆ ಪ್ರತಿಕ್ರಿಯಿಸಿದ ನಾರಾಯಣಸ್ವಾಮಿ, ಜಾಗದ ಸಮಸ್ಯೆಯಿದ್ದಲ್ಲಿ ನನ್ನ ಗಮನಕ್ಕೆ ತಂದಿದ್ದರೆ ನಾನೇ ಸಮಸ್ಯೆ ಬಗೆಹರಿಸಿಕೊಡುತ್ತಿದ್ದೆ. ಆದರೆ ನಿಮಗೆ ಸರ್ಕಾರಿ ಕೆಲಸಕ್ಕಿಂತ ಸ್ವಂತ ಕೆಲಸದ ಬಗ್ಗೆ ಹೆಚ್ಚು ಆಸಕ್ತಿ ಹೆಚ್ಚಾಗಿದೆ ತರಾಟೆಗೆ ತೆಗೆದುಕೊಂಡರು.

ಪಕ್ಕದಲ್ಲೇ ತಹಸೀಲ್ದಾರ್ ಚಂದ್ರಮೌಳೀಶ್ವರ್ ಇದ್ದರೂ ಸ್ಥಳದ ಬಗ್ಗೆ ಕೇಳುವ ಗೋಜಿಗೆ ಎಇಇ ರಾಮಕೃಷ್ಣಪ್ಪ ಹೋಗದಿದ್ದರಿಂದ, ಶಾಸಕ ಅಣತಿ ಮೇರೆಗೆ ಸಂಬಂಧಪಟ್ಟ ಲೆಕ್ಕಿಗರು ಕಚೇರಿಗೆ ದಾಖಲೆಗಳ ಸಮೇತ ಹಾಜರಾಗಿ ಮುಂದಿನ ಕ್ರಮಕ್ಕೆ ಮುಂದಾದರು.

ತಾಪಂಗೆ ಲಭ್ಯವಾಗುತ್ತಿರುವ ಅನುದಾನದಲ್ಲಿ ಶೇ.50 ಅಂಗನವಾಡಿ ಕಟ್ಟಡ, ಸರ್ಕಾರಿ ಶಾಲಾ ಕಟ್ಟಡ, ಸಮುದಾಯ ಶೌಚಗೃಹಗಳ ನಿರ್ವಾಣಕ್ಕೆ, ಉಳಿದ ಅನುದಾನವನ್ನು ಪೈಪ್‌ಲೈನ್ ಕಾಮಗಾರಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಲು ಅವಕಾಶವಿದೆ ಎಂದರು.

ತಾಪಂ ಇಒ ಎನ್.ವೆಂಕಟೇಶಪ್ಪ, ಜಿಪಂ ಎಇಇ ಶೇಷಾದ್ರಿ, ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ.ಸುನೀಲ್‌ಕುವಾರ್, ಬೆಸ್ಕಾಂ ಎಇಇ ರಾಮಕೃಷ್ಣಪ್ಪ, ಕಾರ್ಮಿಕ ನಿರೀಕ್ಷಕ ರೇಣುಕಾಪ್ರಸಾದ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಅನುದಾನ ಬಳಕೆಯಾಗಲಿ: 15ನೇ ಹಣಕಾಸು ಯೋಜನೆಯಲ್ಲಿ ತಾಪಂಗೆ ಸರ್ಕಾರದಿಂದ 1.25 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ನನ್ನ ಒತ್ತಡದ ಮೇರೆಗೆ ಹೆಚ್ಚುವರಿ 2 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಯಾಗಿದೆ. ಒಟ್ಟು 3.25 ಕೋಟಿ ಅನುದಾನ ರೂ. ಬಂದಿದೆ. ಬಂಗಾರಪೇಟೆ ತಾಪಂ ವ್ಯಾಪ್ತಿಗೆ ತಮ್ಮನ್ನೂ ಸೇರಿಸಿಕೊಂಡು ಒಟ್ಟು ಸದಸ್ಯರ ಸಂಖ್ಯೆ15 ಮಂದಿಯಾಗಿದೆ. ತಲಾ 21.71 ಲಕ್ಷದ ಮೊತ್ತ ಲಭ್ಯವಾಗಲಿದೆ. ಆಯಾ ತಾಪಂ ಸದಸ್ಯರು ತಮ್ಮ ಕ್ಷೇತ್ರಗಳಿಗೆ ದೊರೆಯುತ್ತಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಶಾಸಕ ನಾರಾಯಣಸ್ವಾಮಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net