

ಮೈಸೂರು: ಮೈಸೂರು ದಸರಾ ಮಹೋತ್ಸವವನ್ನು ಇಂದು ಉದ್ಘಾಟನೆ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಉಡುಗೊರೆಯಾಗಿ ನೀಡಲಾಯಿತು.
92.5% ಪರಿಶುದ್ಧ ಬೆಳ್ಳಿಯಿಂದ ಕೂಡಿರುವ ಚಾಮುಂಡೇಶ್ವರಿ ದೇವಿಯ ಮೂರ್ತಿ ಇದು. ಇದನ್ನು ರಾಜಸ್ಥಾನದ ಜೈಪುರ್ ನ ಕರಕುಶಲಕಾರರಿಂದ ವಿನ್ಯಾಸ ಮಾಡಿಸಲಾಗಿದೆ. ಚಾಮುಂಡೇಶ್ವರಿ ದೇವಿಯ ಈ ಮೂರ್ತಿ 4.25 ಕೆಜಿ ತೂಕವನ್ನು ಹೊಂದಿದೆ.
ಇನ್ನೂ ವಿಶೇಷವೆಂದರೆ, ದಸರಾ ಉದ್ಘಾಟನೆಗೆ ಆಹ್ವಾನಿಸಲು ದೆಹಲಿಗೆ ಹೋಗಿದ್ದಾಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಉಡುಗೊರೆಯಾಗಿ ನೀಡಿದ್ದ ಸೀರೆಯನ್ನುಟ್ಟುಕೊಂಡೇ ರಾಷ್ಟ್ರಪತಿ ಇಂದು ಸಾಂಸ್ಕೃತಿಕ ನಗರಿಗೆ ಆಗಮಿಸಿದ್ದರು. ಸುಮಾರು 70 ಸಾವಿರ ರೂ. ಬೆಲೆಯ ಮೈಸೂರು ರೇಷ್ಮೆ ಸೀರೆ ಇದು. ಅಪ್ಪಟ ರೇಷ್ಮೆ ಮತ್ತು ಅಪ್ಪಟ ಚಿನ್ನದ ಎಳೆಗಳನ್ನು ಬಳಸಿ ತಯಾರಿಸಲಾಗಿದೆ. ರಾಷ್ಟ್ರಪತಿಯವರು ಬಿಳಿ ಸೀರೆ ಇಷ್ಟಪಡುತ್ತಾರೆ ಎಂಬ ಕಾರಣಕ್ಕೆ ಸರ್ಕಾರಿ ಸ್ವಾಮ್ಯದ ಕೆ.ಎಸ್.ಐ.ಸಿ.ಯ ಸರ್ಕಾರಿ ರೇಷ್ಮೆ ಕಾರ್ಖಾನೆಗೆ ಈ ಉಡುಪು ತಯಾರಿಕೆಗೆ ಆದೇಶ ನೀಡಿ, ಸಿದ್ಧಪಡಿಸಲು ಸೋಮಶೇಖರ್ ಸೂಚಿಸಿದ್ದರು. ದ್ರೌಪದಿ ಮುರ್ಮು ಅವರು ಇಷ್ಟಪಡುವ ನೈಸರ್ಗಿಕ ಬಿಳಿ ಬಣ್ಣದ ಈ ಸೀರೆಯನ್ನು ಗೌರವಸೂಚಕವಾಗಿ ಅವರಿಗೆ ಸಮರ್ಪಿಸಲಾಗಿತ್ತು.