

ಕೋಲಾರ: ಕರೊನಾ ಸೋಂಕು ಸರಪಣಿ ಮುರಿಯುವ ಸಲುವಾಗಿ ನಡೆಸುತ್ತಿರುವ ಲಾಕ್‌ಡೌನ್ ಅನ್ನೇ ಬಂಡವಾಳ ಮಾಡಿಕೊಂಡು ಟ್ಯಾಂಕರ್ ಮಾಫಿಯಾ ನಡೆಸಲು ಮುಂದಾದರೆ ಸಹಿಸಲಾಗದು ಎಂದು ಸಂಸದ ಎಸ್.ಮುನಿಸ್ವಾಮಿ ಖಡಕ್ ಎಚ್ಚರಿಕೆ ನೀಡಿದರು.
ಎಪಿಎಂಸಿ ಸಭಾಗಂಣದಲ್ಲಿ ಮಂಗಳವಾರ ಪುರಪಿತೃಗಳ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನಗರದಲ್ಲಿ ಕೆಲವಷ್ಟೇ ಬೋರ್‌ವೆಲ್ ಕಾರ್ಯನಿರ್ವಹಿಸುತ್ತಿರುವುದರಿಂದ ಬೇಡಿಕೆಗೆ ತಕ್ಕಂತೆ ನೀರು ಸರಬರಾಜು ಸಾಧ್ಯವಾಗುತ್ತಿಲ್ಲ. ಲಾಕ್‌ಡೌನ್ ಬಂಡವಾಳವನ್ನಾಗಿಸಿಕೊಂಡು ಟ್ಯಾಂಕರ್ ಮಾಫಿಯಾಗೆ ಇಳಿದರೆ ಸಹಿಸಲ್ಲ ಎಂದರು.
ಪ್ರತಿ ವಾರ್ಡ್‌ಗಳಲ್ಲಿ ಹೊಸ ಬೋರ್ ಕೊರೆದರೆ ನೀರು ಸಿಗುವ ಖಚಿತತೆ ಇಲ್ಲ.1000 ಅಡಿಯೊಳಗಿನ ಬೋರ್‌ಗಳನ್ನು ಮಾತ್ರ ರೀಬೋರ್ ಮಾಡಿಸಿ. ಬತ್ತಿರುವ ಬೋರ್‌ವೆಲ್‌ನ ಪಂಪ್ ಮೋಟಾರ್‌ಗಳನ್ನು ನೀರಿರುಇ ಬೋರ್‌ಗಳಿಗೆ ಅಳವಡಿಸಿ. ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆಯಲು ಒತ್ತು ನೀಡುವಂತೆ ಪೌರಾಯುಕ್ತರಿಗೆ ಸೂಚಿಸಿದರು.
ಬೋರ್‌ವೆಲ್ ಕೊರೆಸಿದ್ದರೂ ಪೈಪ್‌ಲೈನ್ ಕಾಮಗಾರಿಗೆ ಜೆಸಿಬಿ ಸಿಗುತ್ತಿಲ್ಲ ಎಂಬ ಸದಸ್ಯ ಪ್ರವೀಣ್‌ಗೌಡ ದೂರಿಗೆ ಜನಪ್ರತಿನಿಧಿಯಾದವರು ಜೆಸಿಬಿ ಸಿಕ್ಕಿಲ್ಲ, ಕೆಲಸಗಾರರು ಸಿಕ್ಕಿಲ್ಲವೆಂದು ಸಬೂಬು ಹೇಳಬಾರದು, ಸಣ್ಣ ಪುಟ್ಟ ಕೆಲಸಗಳನ್ನು ನೀವೇ ಮಾಡಿಸಬೇಕೆಂದು ಕಿವಿಮಾತು ಹೇಳಿದರು.
ವಾರ್ಡ್‌ಗಳಲ್ಲಿನ ಕೊಳವೆಬಾವಿ ಬತ್ತಿದೆ, ಟ್ಯಾಂಕರ್ ಮೂಲಕ ಅಗತ್ಯವಿದ್ದಷ್ಟು ನೀರು ಸರಬರಾಜು ಮಾಡಲಾಗುತ್ತಿಲ್ಲ, ಆದ್ಯತೆ ಮೇರೆಗೆ ಕೊಳವೆಬಾವಿ ಕೊರೆಸಬೇಕೆಂದು ಸದಸ್ಯರಾದ ಎಸ್.ಆರ್.ಮುರಳಿಗೌಡ, ರಾಕೇಶ್, ನಾರಾಯಣಮ್ಮ, ಮಂಜುನಾಥ ಇತರರು ಒತ್ತಾಯಿಸಿದರು.
ಡಿಸಿ ಸಿ.ಸತ್ಯಭಾಮ ಮಾತನಾಡಿ, ನಗರಸಭೆ ಇತಿಹಾಸದಲ್ಲಿ ಬೋರ್‌ವೆಲ್ ಮರುಕೊರೆಯಿಸಿದ್ದಿಲ್ಲ, ಪ್ರಸ್ತುತ 20 ಕೊಳವೆಬಾವಿಗಳನ್ನು ರೀ ಡ್ರಿಲ್ ಮಾಡಲು ಕ್ರಮಕೈಗೊಳ್ಳಲಾಗಿದೆ. ಹೊಸದಾಗಿ ಟ್ಯಾಂಕರ್ ನೀಡಲಾಗದು, ಇರುವ ಟ್ಯಾಂಕರ್‌ಗಳಿಂದಲೇ ಒಂದೆರಡು ಟ್ರಿಪ್ ಹೆಚ್ಚುವರಿಯಾಗಿ ನೀಡಬಹುದಾಗಿದೆ ಎಂದರು.
ಕಸ ವಿಲೇವಾರಿಗೆ ಚುಂಚದೇನಹಳ್ಳಿ ಸಮೀಪ 2 ಎಕರೆ ಜಾಗ ಗುರುತಿಸಿದ್ದು ಸ್ವಾಧೀನಪಡಿಸಿ ಬೇಲಿ ಹಾಕಬೇಕಿದೆ. ಆದರೆ ಜನ ಅಡ್ಡಿಪಡಿಸುತ್ತಿದ್ದಾರೆಂದು ಪೌರಾಯುಕ್ತ ಶ್ರೀಕಾಂತ್ ನುಡಿದಾಗ ಕಸ ವಿಲೇವಾರಿ ಯಾರದೇ ಸ್ವಂತ ಕೆಲಸವಲ್ಲ, ಸಾರ್ವಜನಿಕರದ್ದೇ ಅಗಿರುವಾಗ ಭೂಮಿ ಸ್ವಾಧೀನಕ್ಕೆ ಯಾರ ಅಪ್ಪಣೆಗೂ ಕಾಯಬೇಕಿಲ್ಲ. ಮೂಲದಲ್ಲೇ ಕಸವನ್ನು ಹಸಿ ಮತ್ತು ಒಣಕಸವಾಗಿ ಸಂಗ್ರಹಿಸಿ ಗೊಬ್ಬರಕ್ಕೆ ಬಳಸಬಹುದು. ಕಸದಿಂದ ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರವಹಿಸಲಾಗುವುದು. ಯಾರೂ ಆತಂಕ ಪಡಬೇಕಿಲ್ಲ ಎಂದರು.
ತಹಸೀಲ್ದಾರ್ ಶೋಭಿತಾ, ಮುಖಂಡರಾದ ಮು. ರಾಘವೇಂದ್ರ, ಟಿಲ್ಲಿ ಮಂಜುನಾಥ್ ಇತರರಿದ್ದರು.
ಇದೇ ಸಂದರ್ಭದಲ್ಲಿ ಎಪಿಎಂಸಿ ವತಿಯಿಂದ ಕರೊನಾ ಸಿಎಂ ಪರಿಹಾರ ನಿಧಿಗೆ 50.40 ಲಕ್ಷ ರೂಪಾಯಿಗಳ ಚೆಕ್ ಅನ್ನು ಅಧ್ಯಕ್ಷ ಡಿ.ಎಲ್. ನಾಗರಾಜ್ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಯರಗೋಳ್ ಡ್ಯಾಂ ನಿರ್ಮಾಣಕ್ಕಿಂತ ಮುನ್ನವೇ ಅಳವಡಿಸಿರುವ ಪೈಪ್‌ಲೈನ್ ಹಾಳಾಗಿದ್ದು, ದುರಸ್ತಿಗೆ ಕ್ರಮಕೈಗೊಳ್ಳಬೇಕು. ಉತ್ತಮ ಮಳೆಯಾದರೆ ಡ್ಯಾಂ ತುಂಬುವ ನಿರೀಕ್ಷೆಯಿದೆ. ಅಷ್ಟರೊಳಗೆ ಗುತ್ತಿಗೆದಾರರ, ಅಧಿಕಾರಿಗಳ ಸಭೆ ಕರೆದು ಬಾಕಿ ಕೆಲಸ ಮುಗಿಸುವಂತೆ ಸೂಚಿಸಬೇಕು. ಕೆ.ಶ್ರೀನಿವಾಸಗೌಡ, ಶಾಸಕ