ಔಷಧ ತರುವ ಮುನ್ನ ಎಚ್ಚರ! ರೋಗಿಯ ಬಲಿ ಪಡೆದ ಹುಬ್ಬಳ್ಳಿಯ ಮೆಡಿಕಲ್‌ ಷಾಪ್‌: ಮದುವೆ ಮನೆಯಲ್ಲಿ ಸೂತಕ

hubli
Published on

ಹುಬ್ಬಳ್ಳಿ : ವೈದ್ಯರು ಬರೆದು ಕೊಡುವ ಔಷಧದ ಚೀಟಿಯನ್ನು ಮೆಡಿಕಲ್‌ ಷಾಪ್‌ನಲ್ಲಿ ತೋರಿಸಿ ಅವರು ಕೊಟ್ಟದ್ದನ್ನು ಹಾಗೆಯೇ ತರುವುದು ಸಾಮಾನ್ಯ. ಅಂಗಡಿಯವರು ಸರಿಯಾಗಿಯೇ ಕೊಟ್ಟಿರುತ್ತಾರೆ ಎಂದು ನಂಬಿ, ಅವರು ಕೊಟ್ಟದ್ದು ಸರಿಯಿದೆಯೇ ಇಲ್ಲವೇ ಎಂದು ನೋಡಲು ಹೋಗುವುದೇ ಇಲ್ಲ. ಆದರೆ ಇದೇ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದ ಅಜ್ಜುಹಳ್ಳಿಯ ವ್ಯಕ್ತಿಯೊಬ್ಬರ ಪ್ರಾಣವನ್ನು ತೆಗೆದಿರುವ ದುರ್ಘಟನೆ ನಡೆದಿದೆ.

ಹುಬ್ಬಳ್ಳಿಯ ಮೆಡಿಕಲ್ ಶಾಪ್ ಸಿಬ್ಬಂದಿ ಎಡವಟ್ಟಿಗೆ ಹನಮಂತಪ್ಪ ಪಾಟೀಲ (62) ಮೃತಪಟ್ಟಿದ್ದಾರೆ. ಅವರ ಮನೆಯಲ್ಲಿ ನಡೆಯಬೇಕಿದ್ದ ಮದುವೆ ರದ್ದಾಗಿದೆ! ಹುಬ್ಬಳ್ಳಿಯ ವೆಲ್‌ನೆಸ್‌ ಫಾರೆವರ್ ಮೆಡಿಕಲ್ ಶಾಪ್‌ನಿಂದ ಇವರು ಔಷಧ ತೆಗೆದುಕೊಂಡದ್ದೇ ಅವರ ಪ್ರಾಣಕ್ಕೆ ಮುಳುವಾಗಿದೆ.

ಖಿನ್ನತೆಯಿಂದ ಬಳಲುತ್ತಿದ್ದ ಹನಮಂತಪ್ಪನವರು ಹುಬ್ಬಳ್ಳಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರು ಅವರಿಗೆ ಔಷಧ ಬರೆದುಕೊಟ್ಟಿದ್ದಾರೆ. ಮಾನಸಿಕ ಖಿನ್ನತೆಗೆ ನೀಡುವ ಮಾತ್ರೆಯ ಬದಲಾಗಿ ಕ್ಯಾನ್ಸರ್ ಹಾಗೂ ಆರ್ಥೈಟಿಸ್‌ಗೆ ನೀಡುವ ಮಾತ್ರೆಯನ್ನು ಮೆಡಿಕಲ್‌ ಷಾಪ್‌ ಸಿಬ್ಬಂದಿ ನೀಡಿದ್ದಾರೆ.

ಇದರ ಅರಿವು ಇಲ್ಲ ಹನಮಂತಪ್ಪನವರು ಅದನ್ನೇ ಅನೇಕ ದಿನ ತೆಗೆದುಕೊಂಡಿದ್ದಾರೆ. ದಿನಕ್ಕೆ ಒಂದರಂತೆ ಮಾತ್ರೆ ತೆಗೆದುಕೊಳ್ಳುತ್ತಿದ್ದ ಅವರು ಕೆಲ ದಿನಗಳ ಬಳಿಕ ಅಸ್ವಸ್ಥರಾದರು. ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಎಸ್‌ಡಿಎಂ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿತ್ತು. ಔಷಧದ ಅಡ್ಡ ಪರಿಣಾಮದಿಂದ ಹೀಗಾಗಿದೆ ಎಂದು ವರದಿಯಲ್ಲಿ ತಿಳಿದುಬಂತು.

ನಂತರ ವಿಚಾರಣೆ ಮಾಡಿದಾಗ ಅವರು ತೆಗೆದುಕೊಳ್ಳುತ್ತಿದ್ದ ಮಾತ್ರೆ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಅಷ್ಟೊತ್ತಿಗಾಗಲೇ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಮಗ ಪ್ರವೀಣನ ಮದುವೆಯನ್ನು ಕುಟುಂಬಸ್ಥರು ರದ್ದುಗೊಳಿಸಿದ್ದಾರೆ. ಗಲಾಟೆ ಆರಂಭವಾಗುತ್ತಿದ್ದಂತೆಯೇ ಮೆಡಿಕಲ್ ಶಾಪ್ ಸಿಬ್ಬಂದಿ ಅಂಗಡಿ ಬಾಗಿಲು ಮುಚ್ಚಿದ್ದಾರೆ. ಪ್ರಕರಣ ಸಂಬಂಧ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net