ಮೊಬೈಲ್​ ಟವರ್​ ಅಳವಡಿಸ್ತೇವೆ, 60 ಲಕ್ಷ ರೂ. ಕೊಡ್ತೇವೆ ಎಂದು ನಂಬಿಸಿ ಮನೆ ಮಾಲೀಕನಿಗೆ 2.21 ಲಕ್ಷ ಟೋಪಿ!

mobile tower
Published on

ಬೆಂಗಳೂರು: ಜಮೀನಿನಲ್ಲಿ ಲಿಯೋ ಕಂಪನಿ ಸಿಗ್ನಲ್​ ಟವರ್​ ಅಳವಡಿಸಿ 60 ಲಕ್ಷ ರೂ. ಮುಂಗಡ, 50 ಸಾವಿರ ರೂ. ಬಾಡಿಗೆ ಆಮಿಷವೊಡ್ಡಿ ಭೂ ಮಾಲೀಕನಿಗೇ ಸೈಬರ್​ ಕಳ್ಳರು 2.21 ಲಕ್ಷ ರೂ. ವಂಚನೆ ಮಾಡಿದ್ದಾರೆ.

ವಸಂತನಗರದ ವೆಂಕಟರಾವ್​ ಮೋಸಕ್ಕೆ ಒಳಗಾದವರು. ಏಪ್ರಿಲ್​ 7 ರಂದು ಮೊಬೈಲ್​ಗೆ ಬಂದ ಸಂದೇಶದಲ್ಲಿ ಜಿಯೋ ಕಂಪನಿ ಸಿಗ್ನಲ್​ ಟವರ್​ ಅಳವಡಿಸಲಾಗುತ್ತದೆ. ಮುಂಗಡವಾಗಿ 60 ಲಕ್ಷ ರೂ. ಮತ್ತು ತಿಂಗಳಿಗೆ 50 ಸಾವಿರ ರೂ. ಬಾಡಿಗೆ ಕೊಡುವುದಾಗಿ ಉಲ್ಲೇಖಿಸಲಾಗಿತ್ತು. ಇದನ್ನು ಗಮನಿಸಿದ ವೆಂಕಟರಾವ್​, ಎಸ್​ಎಂಎಸ್​ನಲ್ಲಿದ್ದ ಮೊಬೈಲ್​ ನಂಬರ್​ಗೆ ಕರೆ ಮಾಡಿ ಟವರ್​ ಅಳವಡಿಸಲು ಒಪ್ಪಿಗೆ ಸೂಚಿಸಿದ್ದರು.

ಸ್ವಲ್ಪ ಸಮಯದ ಬಳಿಕ ವೆಂಕಟರಾವ್​ಗೆ ಮತ್ತೊಬ್ಬ ಕರೆ ಮಾಡಿ ಅವರ ಆಧಾರ್​ ಕಾರ್ಡ್​, ವೋಟರ್​ ಐಡಿ, ಪಹಣಿ ಎಲ್ಲವನ್ನು ಮೊಬೈಲ್​ನಲ್ಲಿ ಫೋಟೋ ತರಿಸಿಕೊಂಡಿದ್ದ. ಆನಂತರ ಟವರ್​ ಅಳವಡಿಸುವುದಾಗಿ ನಂಬಿಸಿ ಕಂಪನಿ ಕಡೆಯಿಂದ ಕರಾರು ಪತ್ತ ಮಾಡಿಸಬೇಕೆಂದು ಹೇಳಿ ಹಂತ ಹಂತವಾಗಿ 2.21 ಲಕ್ಷ ರೂ. ತನ್ನ ಬ್ಯಾಂಕ್​ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಪದೇ ಪದೆ ಹಣ ಕೇಳಿದಾಗ ಅನುಮಾನ ಬಂದು ವಾಪಸ್​ ಹಣ ಕೇಳಿದ್ದಾಗ ವಂಚಕರು ಮೊಬೈಲ್​ ಸಂಪರ್ಕ ಕಡಿತ ಮಾಡಿದ್ದಾರೆ. ಕೊನೆಗೆ ದಿಕ್ಕು ತೋಚದೆ ವೆಂಕಟರಾವ್​, ಠಾಣೆಗೆ ಬಂದು ದೂರು ನೀಡಿದ್ದಾರೆ. ಇದರ ಅನ್ವಯ ಆರೋಪಿಗಳ ವಿರುದ್ಧ ಎ್​ಐಆರ್​ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಕೇಂದ್ರ ವಿಭಾಗ ಸಿಇಎನ್​ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net