ಮಹಿಳೆಯ ಜೀವ ತೆಗೆದ ಶಾಸಕ ಕುಮಾರಸ್ವಾಮಿ ಕಾರು- ಸಿಸಿಟಿವಿಯಲ್ಲಿ ಬಯಲಾಯ್ತು ಅಸಲಿಯತ್ತು!

ಮೂಡಿಗೆರೆ ಶಾಸಕರಿಗೆ ಸೇರಿದ ಕಾರ್ ಡಿಕ್ಕಿ, ಮಹಿಳೆ ಸಾವು #MudigereMLA #CarAccident #Beluru #WomeDeath - youtube
Published on

ಹಾಸನ: ಶಾಸಕರ‌ ಕಾರು ಬೈಕೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ 58 ವರ್ಷದ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಲ್ಲದೆ ಆಕೆಯ ಮೊಮ್ಮಗ ಕೂಡ ಗಾಯಗೊಂಡ ಘಟನೆ ನಿನ್ನೆ ಸಂಜೆ ಹಾಸನ ಜಿಲ್ಲೆಯ ಬೇಲೂರಿನ ಹನುಮಂತನಗರದಲ್ಲಿ ನಡೆದಿತ್ತು.

ಹನುಮಂತನಗರದ ನಿವಾಸಿ ಹೂವಮ್ಮ‌ (58) ಮೃತಪಟ್ಟಿದ್ದು, ಇವರ ಮೊಮ್ಮಗ ಪ್ರೀತಂ ಗಾಯಗೊಂಡಿದ್ದಾರೆ. ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಸೇರಿದ ಕಾರು ಬೈಕ್​ಗೆ ಡಿಕ್ಕಿ ಹೊಡೆದಿದ್ದರಿಂದ ಹಿಂಬದಿಯಲ್ಲಿ ಕೂತಿದ್ದ ಹೂವಮ್ಮ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ನಡುವೆಯೇ ತನ್ನನ್ನು ಸಮರ್ಥಿಸಿಕೊಂಡಿದ್ದ ಚಾಲಕ ಪ್ರವೀಣ್‌, ತನ್ನದೇನೂ ತಪ್ಪಿಲ್ಲ. ಇಂಡಿಕೇಟರ್‌ ಹಾಕದೇ ಬೈಕ್‌ ಸವಾರ ಏಕಾಏಕಿ ರಸ್ತೆಯ ಪಕ್ಕಕ್ಕೆ ಬೈಕ್‌ ತೆಗೆದುಕೊಂಡು ಹೋಗಿದ್ದ ಎಂದು ಹೇಳಿಕೆ ಕೊಟ್ಟಿದ್ದ.

ಆದರೆ ಇದೀಗ ಅಪಘಾತದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದಾಗ ಅಸಲಿಯತ್ತು ಬೆಳಕಿಗೆ ಬಂದಿದೆ. ಅದೇನೆಂದರೆ, ಅಪಘಾತಕ್ಕೆ ಚಾಲಕನ ಅತಿವೇಗ ಹಾಗೂ ಚಾಲಕ‌ನ ಅಜಾಗರೂಕತೆಯೇ ಕಾರಣ ಎನ್ನುವುದು. ಶಾಸಕರ ಕಾರು ಅತಿವೇಗವಾಗಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಷ್ಟೇ ಅಲ್ಲದೇ, ಚಾಲಕ ಪ್ರವೀಣ್‌ ಕಾರಿನಲ್ಲಿ ಶಾಸಕ ಇಲ್ಲದಿದ್ದರೂ ಸೈರನ್ ಹಾಕಿಕೊಂಡು ಕಾರು ಚಾಲನೆ ಮಾಡಿದ್ದಾನೆ. ಈ ಸೈರನ್‌ಗೆ ಹಾಗೂ ಅತಿವೇಗದಿಂದ ಕಾರು ಬಂದ ಕಾರಣ, ಇದಕ್ಕೆ ಹೆದರಿ, ಬೈಕ್‌ ಅನ್ನು ರಸ್ತೆಯ ಪಕ್ಕಕ್ಕೆ ಸರಿಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net