

ಬೆಂಗಳೂರು: ಸರ್ಕಾರದ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ಮತ್ತು ವಿಡಿಯೋ ಚಿತ್ರೀಕರಣವನ್ನು ನಿಷೇಧಿಸಲಾಗಿದೆ ಎಂದು ಸರ್ಕಾರ ನಿನ್ನೆ (ಜುಲೈ 15) ಮಧ್ಯಾಹ್ನ ಆದೇಶ ಹೊರಡಿಸಿತ್ತು. ಆದೇಶ ಹೊರಡಿಸಿದ ಕ್ಷಣಾರ್ಧದಲ್ಲಿಯೇ ಇದು ಇಡೀ ರಾಜ್ಯದಲ್ಲಿಯೇ ಸಂಚಲನ ಸೃಷ್ಟಿಸಿಬಿಟ್ಟಿತ್ತು. ಭಾರಿ ವೈರಲ್ ಆದ ಈ ಆದೇಶ ಸಾಮಾಜಿಕ ಜಾಲತಾಣದಲ್ಲಿ ಹಂಗಾಮಾ ಸೃಷ್ಟಿಸಿತ್ತು. ಸಹಸ್ರಾರು ಮಂದಿ ಇದರ ವಿರುದ್ಧ ಗರಂ ಆಗಿದ್ದರು.
ಸರ್ಕಾರಿ ನೌಕರರ ಪ್ರಾತಿನಿಧಿಕ ಸಂಸ್ಥೆಯಾಗಿರುವ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿಯೊಂದನ್ನು ಸಲ್ಲಿಸಿ, ಖಾಸಗಿ ವ್ಯಕ್ತಿಗಳು ಫೋಟೋ, ವಿಡಿಯೋ ಮಾಡದಂತೆ ನಿಷೇಧಿಸುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿತ್ತು. ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಅವರ ಕೆಲಸ ಕಾರ್ಯಗಳ ನಿಮಿತ್ತ ಆಗಮಿಸುವುದು ಸರ್ವೆಸಾಮಾನ್ಯ. ಕೆಲವು ಖಾಸಗಿ ವ್ಯಕ್ತಿಗಳು ಕಚೇರಿ ವೇಳೆಯಲ್ಲಿ ಬಂದು ಕಚೇರಿಯ ವಿಡಿಯೋ, ಫೋಟೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದರಿಂದ ಸರ್ಕಾರದ ಘನತೆಗೆ ಕುಂದುಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿತ್ತು. ವಿಶೇಷವಾಗಿ ಮಹಿಳಾ ನೌಕರರಿಗೆ ಸಮಸ್ಯೆ ಉಂಟುಮಾಡುತ್ತಿರುವುದರಿಂದ ಎಲ್ಲ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ, ವಿಡಿಯೋ ಮಾಡದಂತೆ ನಿರ್ಬಂಧ ಮಾಡಬೇಕು ಎಂದು ಕೋರಿತ್ತು. ಇದರ ಹಿನ್ನೆಲೆಯಲ್ಲಿ ಸರ್ಕಾರ ಫೋಟೋ/ ವಿಡಿಯೋ ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು.
ಆದರೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಕಾರಣ, ಎಚ್ಚೆತ್ತುಕೊಂಡ ಸರ್ಕಾರ, ತನ್ನ ಆದೇಶವನ್ನು ಮಧ್ಯರಾತ್ರಿ ವಾಪಸ್ ಪಡೆದುಕೊಂಡಿತು. ಈ ಸಂಬಂಧ ಹೊಸ ಆದೇಶವನ್ನು ಹೊರಡಿಸಿ, ವಿಡಿಯೋ, ಫೋಟೋ ನಿಷೇಧ ಮಾಡಿರುವ ಆದೇಶವನ್ನು ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿತ್ತು.
ಆದರೆ ಈ ಹೊಸ ಆದೇಶದ ಪ್ರತಿ ಮತ್ತೆ ಟ್ರೋಲ್ ಆಗುತ್ತಿದೆ. ಮಧ್ಯರಾತ್ರಿ ಹೊರಡಿಸಿರುವ ಈ ಆದೇಶದಲ್ಲಿ ತಪ್ಪು ತಪ್ಪಾಗಿ ಟೈಪ್ ಆಗಿದ್ದು, ಇದರ ವಿರುದ್ಧ ಕನ್ನಡಿಗರು ಗರಂ ಆಗಿದ್ದಾರೆ. ಕರ್ನಾಟಕದಲ್ಲಿ, ಕನ್ನಡವನ್ನು ದೇವರೇ ಕಾಪಾಡಬೇಕು, ಮಧ್ಯರಾತ್ರಿಯಲ್ಲಿ ಸರ್ಕಾರ ಇದ್ಯಾವ ಭಾಷೆಯಲ್ಲಿ ಆದೇಶ ಹೊರಡಿಸಿದೆ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.
ಇಲ್ಲಿವೆ ನೋಡಿ ತಪ್ಪುಗಳ ಸರಮಾಲೆ:
ನಡಾವಳಿಯು ನಡವಳಿ ಆಗಿದ್ದರೆ, ಪ್ರಸ್ತಾವನೆ ಎನ್ನುವ ಬದಲು ಪ್ರಸತ್ತಾವನೆ, ಮೇಲೆ ಬದಲು ಮೇಲೇ, ಭಾಗ ಬದಲು ಬಾಗ, ಕರ್ನಾಟಕ ಬದಲು ಕರ್ನಾಟಾ, ಆಡಳಿತ ಬದಲು ಆಡಳಿದ ಎಂಬೆಲ್ಲಾ ತಪ್ಪುಗಳು ಆಗಿವೆ.