

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಟ್ಟಬೇಕಿರುವ ಕೋಟ್ಯಂತರ ರೂಪಾಯಿ ತೆರಿಗೆಯನ್ನು ಕಟ್ಟದೇ ಇದಾಗಲೇ ಹಲವಾರು ಬಾರಿ ಬೀಗ ಹಾಕಿಸಿಕೊಂಡಿರುವ ಬೆಂಗಳೂರಿನ ಪ್ರತಿಷ್ಠಿತ ಮಂತ್ರಿಮಾಲ್ ಇದೀಗ ಭಾರಿ ಸಂಕಷ್ಟಕ್ಕೆ ಸಿಲುಕಿದೆ.
ಮಂತ್ರಿ ಮಾಲ್ ನಾಲ್ಕು ವರ್ಷಗಳಿಂದ 33 ಕೋಟಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿದೆ. ಬಾಕಿ ಹಣವನ್ನು 2021ರ ಡಿಸೆಂಬರ್ 5ರಂದು ಸಂಪೂರ್ಣ ಕಟ್ಟುವುದಾಗಿ ಕಳೆದ ವರ್ಷವೇ ಹೇಳಿದ್ದರೂ ಇನ್ನೂ ತೆರಿಗೆ ಕಟ್ಟಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಹಲವಾರು ಬಾರಿ ಮಂತ್ರಿಮಾಲ್‌ಗೆ ಬೀಗ ಕೂಡ ಹಾಕಲಾಗಿತ್ತು. ಇಷ್ಟಾದರೂ ತೆರಿಗೆ ಇನ್ನೂ ಕಟ್ಟಲಿಲ್ಲ.
ಈ ಕುರಿತು ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಬಂದಾಗ ನ್ಯಾಯಾಲಯವು, ‘ಪದೇ ಪದೇ ಈ ರೀತಿ ಬೀಗ ಹಾಕುವ ಬದಲು ಒಂದೇ ಸಲ ಪ್ರಕರಣವನ್ನು ಇತ್ಯರ್ಥಗೊಳಿಸಿಕೊಳ್ಳಿ. ತೆರಿಗೆ ಪಾವತಿ ಮಾಡದಿದ್ದರೆ ಮಾಲ್‌ನ ಸ್ಥಿರ ಇಲ್ಲವೇ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ಸಿವಿಲ್ ಕೇಸ್ ದಾಖಲು ಮಾಡಿ ಶಾಶ್ವತವಾಗಿ ಸಮಸ್ಯೆ ಪರಿಹರಿಸಿಕೊಳ್ಳಿ’ ಎಂದು ಬೃಹತ್ ಬೆಂಗಳೂರು ಮಹಾನಗರಪಾಲಿಕೆಗೆ (ಬಿಬಿಎಂಪಿ) ಸೂಚಿಸಿದೆ.
ತೆರಿಗೆ ಬಾಕಿ ಪಾವತಿಸದ ಕಾರಣಕ್ಕೆ ಹಾಕಲಾಗಿರುವ ಬೀಗ ತೆರವುಗೊಳಿಸುವಂತೆ ನಿರ್ದೇಶನ ಕೋರಿ ಮಂತ್ರಿ ಮಾಲ್ ಆಡಳಿತ ಮಂಡಳಿ ಹಾಗೂ ಹಮಾರಾ ಶೆಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರು ಈ ರೀತಿಯ ಸೂಚನೆಯನ್ನು ಬಿಬಿಎಂಪಿಗೆ ನೀಡಿದ್ದಾರೆ.
ನೀವು ಬೀಗ ಹಾಕಿದಾಗಲೆಲ್ಲಾ ಒಂದಿಷ್ಟು ಹಣವನ್ನು ಮಾಲ್ ಆಡಳಿತ ಮಂಡಳಿ ಪಾವತಿ ಮಾಡುತ್ತದೆ. ಆದರೆ ಇನ್ನೂ ಹಣವನ್ನು ಬಾಕಿ ಉಳಿಸಿಕೊಳ್ಳುತ್ತದೆ. ಪುನಃ ನೀವು ಬೀಗ ಹಾಕುತ್ತೀರಿ, ಮತ್ತದೇ ರಾಗ. ಅದರ ಬದಲು ಶಾಶ್ವತ ಪರಿಹಾರದ ರೂಪದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ಕೇಸ್ ಹಾಕಿ ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂತ್ರಿ ಮಾಲ್ ಆಡಳಿತ ಮಂಡಳಿ ಇದೀಗ ಪೇಚಿಗೆ ಸಿಲುಕಿದೆ. ಸಂಪೂರ್ಣ ತೆರಿಗೆ ಹಣ ಪಾವತಿ ಮಾಡದೇ ಹೋದರೆ ಶಾಶ್ವತವಾಗಿ ಬಂದ್ ಮಾಡಬೇಕಾದ ಅನಿವಾರ್ಯತೆ ಎದುರಾಗುವ ಸಾಧ್ಯತೆ ಇದೆ.