VIDEO: ಸಿಎಂ ನಿವಾಸದ ಮುಂದೆ ಘರ್ಜಿಸುತ್ತಿದೆ ಸಿಂಹ: ಇದು ಮೇಕ್‌ ಇನ್‌ ಇಂಡಿಯಾದ ಹೆಮ್ಮೆ

lanchana10
Published on

ಬೆಂಗಳೂರು: ದೇಶದಲ್ಲೇ ಅತೀ ದೊಡ್ಡ ಮೇಕ್​​ ಇನ್​​ ಇಂಡಿಯಾ ಲಾಂಛನ ಇಂದು ಬೆಂಗಳೂರಿನಲ್ಲಿ ತಲೆಎತ್ತಲಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನಿವಾಸ ’ಕಾವೇರಿ’ ಮುಂಭಾಗದ ವೃತ್ತದಲ್ಲಿ ಈ ಲಾಂಛನ ನಿರ್ಮಾಣವಾಗಿದ್ದು, ಅದನ್ನು ಯಡಿಯೂರಪ್ಪ ಇಂದು ಉದ್ಘಾಟನೆ ಮಾಡಲಿದ್ದಾರೆ.

ಇದು ಮೇಕ್​​ ಇನ್​ ಇಂಡಿಯಾ ಬಿಂಬಿಸುವ ಸಿಂಹದ ಲಾಂಛನವಾಗಿದೆ. 50 ಲಕ್ಷ ವೆಚ್ಚದಲ್ಲಿ ಇದು ನಿರ್ಮಾಣವಾಗುತ್ತಿದ್ದು, ಘರ್ಜಿಸುವ ಸಿಂಹ ನಡಿಗೆಯನ್ನು ಇದರಲ್ಲಿ ನೋಡಬಹುದಾಗಿದೆ. ಈ ಮೂಲಕ ದೇಶದ ಹೆಮ್ಮೆಯ ಸಂಕೇತಕ್ಕೆ ಸಾಕ್ಷಿಯಾಗುತ್ತಿದೆ ಸಿಲಿಕಾನ್​ ಸಿಟಿ.

ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಮೇರೆಗೆ ಬಿಬಿಎಂಪಿಯಿಂದ ಇದನ್ನು ನಿರ್ಮಾಣ ಮಾಡಲಾಗುತ್ತಿದೆ. ಘಜಿಯಾಬಾದ್‌ನಲ್ಲಿ ತಯಾರಾಗಿ ಬೆಂಗಳೂರಿಗೆ ಇದು ಆಗಮಿಸಲಿದೆ. ದೇಶದಲ್ಲೇ ಅತ್ಯುತ್ತಮ ತಯಾರಕರು ಎನಿಸಿರುವ ತಯಾರಕರಿಂದ ಇದನ್ನು ತಯಾರು ಮಾಡಲಾಗಿದೆ.

ಏನಿದರ ವಿಶೇಷತೆ?

ಈ ಲಾಂಛನವು 1,460 ಕೆ.ಜಿ ತೂಕದ್ದಿದ್ದು, 23 ಅಡಿ ಉದ್ದ, 10 ಅಡಿ ಎತ್ತರ, ನಾಲ್ಕೂವರೆ ಅಡಿ ಅಗಲವಿದೆ. ಫೈಬರ್​ ರಿ ಇನ್​​ಫೋರ್ಸ್​​ರ್ಡ್​​ ಪ್ಲಾಸ್ಟಿಕ್ (Fiber reinforced plastic) ಬಳಸಿ ಇದನ್ನು ತಯಾರು ಮಾಡಲಾಗಿದೆ.

ನಾಲ್ಕು ದಿಕ್ಕಿಗೂ ಇದು ತಿರುಗಲಿದ್ದು, ಲಾಂಛನ ಇನ್ನಷ್ಟು ಆಕರ್ಷಣೀಯವಾಗಿ ಕಾಣಿಸಲು ಲೈಟಿಂಗ್ಸ್​ ಅಳವಡಿಕೆ ಮಾಡಲಾಗಿದೆ. ಇದರ ಮುಂಭಾಗದಲ್ಲಿ ನೀರಿನ ಕಾರಂಜಿಯ ವ್ಯವಸ್ಥೆ ಇದೆ. ಹುಲ್ಲುಹಾಸಿನ ಮೇಲೆ ಇದನ್ನು ನಿರ್ಮಾಣ ಮಾಡಲಾಗಿದೆ.

ಕೇಂದ್ರ ಸರ್ಕಾರ ರಾಜ್ಯದಲ್ಲಿ ಮೇಕ್​​ ಇನ್​ ಇಂಡಿಯಾಗೆ ಹೆಚ್ಚಿನ ಒತ್ತು ಕೊಡುತ್ತಿರುವ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದೆ. ಈ ಲಾಂಛನ ನೋಡುಗರಿಗೆ ಸ್ಫೂರ್ತಿ ತುಂಬಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net