

ಬೆಂಗಳೂರು: ಒಬ್ಬ ಹಿಂದೂ ಯುವಕ ಮುಸ್ಲಿಂ ಧರ್ಮದೆಡೆ ವಾಲಿ ಉಗ್ರನಾಗಿ ಇಡೀ ದೇಶವನ್ನೇ ಧ್ವಂಸ ಮಾಡುವ ಮಹಾಸಂಚು ರೂಪಿಸಲು ಕಾರಣವಾಗಿದ್ದು ಅಪ್ಪ- ಅಮ್ಮನ ಜಗಳ!
ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಎನ್‌ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ಅಧಿಕಾರಿಗಳಿಂದ ಬಂಧನಕ್ಕೊಳಪಟ್ಟ ಯುವಕ ಮಾದೇಶ್ ಪೆರುಮಾಳು ಅಲಿಯಾಸ್ ಅಬ್ದುಲ್ಲಾಗೆ ಇನ್ನೂ 23 ವರ್ಷ ವಯಸ್ಸು. ಪಿಯುಸಿ ಫೇಲ್ ಆಗಿದ್ದ ಈ ಯುವಕ ಮುಸ್ಲಿಂ ಧರ್ಮದೆಡೆ ವಾಲಿ ನಂತರ ಉಗ್ರನಾಗಿರುವ ಹಿಂದೆ ಇರುವ ಕಾರಣ ಕುಟುಂಬದಲ್ಲಿನ ಕಿರಿಕಿರಿ! ಮಾದೇಶನ ತಂದೆ ತಾಯಿ ಒಳ್ಳೆಯ ಉದ್ಯೋಗದಲ್ಲಿದ್ದರು. ಆದ್ರೆ ಇಬ್ಬರ ಮಧ್ಯೆ ಮನಸ್ತಾಪವಾಗಿ ಬೇರೆ ಬೇರೆಯಾಗಿದ್ದರು. ಸದಾ ಜಗಳ ಕಿತ್ತಾಟದಿಂದಾಗಿ ಮಾದೇಶ ರೋಸಿ ಹೋಗಿದ್ದ.
ನಂತರ ಆತ ಮುಸ್ಲಿಂ ಧರ್ಮದ ಕಡೆಗೆ ಆಕರ್ಷಿತನಾಗಿ, ಚೆನ್ನೈನ ಮುಸ್ಲಿಂ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ. ಪಿಯುಸಿ ಫೇಲ್ ಆಗಿ ಮನೆಯಲ್ಲಿದ್ದಾಗ ಇಂಟರ್‌ನೆಟ್ ಬಳಕೆ ಹೆಚ್ಚಾಗಿತ್ತು. ಈ ನಡುವೆಯೇ 2020ರಲ್ಲಿ ಮಾದೇಶನ ತಂದೆ ತಾಯಿಗೆ ವಿಚ್ಛೇದನವಾಯಿತು.
ಮಾದೇಶನ ತಾಯಿ ಮತ್ಯಾರನ್ನೋ ಮದ್ವೆ ಆಗಿ ಅಮೆರಿಕಕ್ಕೆ ಹೋದರು. ಇತ್ತ ಮಾದೇಶನ ತಂದೆ ಕ್ರಿಶ್ಚಿಯನ್ ಮಹಿಳೆಯೊಬ್ಬರನ್ನು ಮದುವೆಯಾಗಿದ್ದರು. ಇವೆಲ್ಲವೂ ಮಾದೇಶನ ಮೇಲೆ ತುಂಬಾನೇ ಪರಿಣಾಮ ಬೀರಿತ್ತು.
ಆಗಲೇ ಕೆಲವು ಉಗ್ರ ಸಂಘಟನೆ ಜತೆ ಸಂಪರ್ಕವಾಯಿತು. ವಿದೇಶದಲ್ಲಿರುವ ಹ್ಯಾಂಡ್ಲರ್‌ಗಳ ಜೊತೆಗೆ ಮಾದೇಶನಿಗೆ ಸಂಪರ್ಕ ಸಾಧಿಸಲು ಇದೇ ಕಾರಣವಾಯ್ತು. ತನ್ನ ಹೆಸರನ್ನು ಅಬ್ದುಲ್ಲಾ ಎಂದು ಬದಲಾಯಿಸಿಕೊಂಡಿದ್ದ ಮಾದೇಶ ಅಫ್ಗಾನಿಸ್ತಾನ ಅಥವಾ ಸಿರಿಯಾಗೆ ಹೋಗಲು ಪ್ಲ್ಯಾನ್ ಮಾಡಿದ್ದ.
ಹ್ಯಾಂಡ್ಲರ್‌ಗಳ ಜೊತೆ ನಿರಂತರ ಸಂಪರ್ಕದಲ್ಲಿರುವಾಗಲೇ ಮಾದೇಶ ಅರೆಸ್ಟ್ ಆಗಿದ್ದಾನೆ. ಈತನ ಬಗ್ಗೆ ಮಾಹಿತಿ ಕಲೆಹಾಕಿದ್ದ ಐಬಿ ಮತ್ತು ಎನ್‌ಐಎ ಅಧಿಕಾರಿಗಳು ಆತನನ್ನು ಬಂಧಿಸಿ ವಿಶೇಷ ಕೋರ್ಟ್‌ಗೆ ಹಾಜರು ಮಾಡಿದ್ದಾರೆ.