

ಮಂಡ್ಯ: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಹೆಸರಿನಲ್ಲಿ ಶ್ರದ್ಧಾಂಜಲಿ ಸಭಾ ಕಾರ್ಯಕ್ರಮ ಮಾಡುವುದು ಬೇಡ, ಬದಲಿಗೆ ಟ್ರಸ್ಟ್ ರಚಿಸಿಕೊಂಡು ಪ್ರತಿವರ್ಷ ಪ್ರಶಸ್ತಿ ನೀಡುವುದು ಮುಖ್ಯವಾಗಬೇಕು ಎಂದು ಸಾಹಿತಿ ಜಿ.ಟಿ.ವೀರಪ್ಪ ಸಲಹೆ ನೀಡಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆ ವತಿಯಿಂದ ಎಸ್.ಎಂ.ಕೃಷ್ಣ ಅವರಿಗೆ ಭಾವ ನಮನ, ಗೀತ ನಮನ, ದೀಪ ನಮನ ಹಾಗೂ ಪುಷ್ಪ ನಮನ ಸಲ್ಲಿಸುವ ಸಂಬಂಧ ಪ್ರಗತಿಪರ ಮುಖಂಡರೊಂದಿಗೆ ಚರ್ಚಿಸಲು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕೃಷ್ಣ ಅವರ ನೆನಪು ಪ್ರತಿ ವರ್ಷ ಇರುವಂತೆ ನೋಡಿಕೊಳ್ಳಬೇಕು. ಇದಕ್ಕೆ ಸರ್ಕಾರ ಅಗತ್ಯ ಚಿಂತನೆ ನಡೆಸಿ ಪಕ್ಷಾತೀತವಾಗಿ ಕಾರ್ಯೋನ್ಮುಖವಾಗಬೇಕು. ಇದರಿಂದ ಎಸ್.ಎಂ.ಕೃಷ್ಣ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಜತೆಗೆ ಅವರ ಹೆಸರಿನಲ್ಲಿ ಪ್ರತಿಷ್ಠಾನ ಮಾಡಿ ಈ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಸುಸಂಸ್ಕೃತ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಹೆಸರಿನಲ್ಲಿ ಸೂಕ್ತವಾಗಿರುವಂತಹ ಹಾಗೂ ಮಂಡ್ಯ ಜಿಲ್ಲೆ ಜನರು ನೆನೆದುಕೊಳ್ಳುವ ಹಾಗೆ ಕಾರ್ಯಕ್ರಮ ಮಾಡೋಣ. ಮತ್ತೊಂದು ಸಭೆ ನಡೆಸಿಯಾದರೂ ಎಸ್.ಎಂ.ಕೃಷ್ಣ ಅವರ ಹೆಸರು ಉಳಿಯುವಂತಹ ಯೋಜನೆ ರೂಪಿಸಿಕೊಳ್ಳೋಣ ಎಂಬ ಸಲಹೆಯನ್ನು ಸಭೆಯಲ್ಲಿ ತಿಳಿಸಿರುವುದನ್ನು ಗಣನೆಗೆ ತೆಗೆದುಕೊಳ್ಳೋಣ ಎಂದರು.
ಜಿಲ್ಲೆಯಲ್ಲಿ ಕೆ.ವಿ.ಶಂಕರಗೌಡ ಅವರು ರಚನಾತ್ಮಕವಾಗಿ ಕೆಲಸವನ್ನು ಮಾಡಿದ್ದಾರೆ, ಎಸ್.ಎಂ.ಕೃಷ್ಣ ಅವರು ಸಂಸ್ಕೃತಿ ಮತ್ತು ಸಜ್ಜನಿಕೆಗೆ ಹೆಸರುವಾಸಿಯಾಗಿದ್ದು, ರಾಜ್ಯ, ರಾಷ್ಟ್ರ ಹಾಗೂ ವಿದೇಶದಲ್ಲಿ ಹೆಸರು ಮಾಡಿರುವ ನಾಯಕರು, ಅವರ ಹೆಸರು ಉಳಿಯುವಂತೆ ಮಂಡ್ಯದಲ್ಲಿ ಪ್ರತಿವರ್ಷ ಕಾರ್ಯಕ್ರಮ ಮಾಡುವಂತಾಗಬೇಕು ಎಂದು ತಿಳಿಸಿದರು.
ಕೇಂದ್ರ ವಲಯ ಐಜಿಪಿ ಬಿ.ಆರ್.ರವಿಕಾಂತೇಗೌಡ ಮಾತನಾಡಿ, ಎಸ್.ಎಂ.ಕೃಷ್ಣ ಅವರ ಹೆಸರಿನಲ್ಲಿ ಒಂದು ಗ್ರಂಥ ತರಬೇಕು. ಇದರಿಂದ ಎಸ್.ಎಂ.ಕೃಷ್ಣ ಅವರ ರಾಜಕೀಯ ಮತ್ತು ಅವರ ಸಾಧನೆಗಳನ್ನು ಜನರಿಗೆ ತಿಳಿಸಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಎಸ್.ಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ, ನೇಗಿಲಯೋಗಿ ಎ.ಸಿ.ರಮೇಶ್, ವಕೀಲ ಟಿ.ಎಸ್.ಸತ್ಯಾನಂದ, ನಿವೃತ್ತ ಜಿಲ್ಲಾಧಿಕಾರಿ ಟಿ.ತಿಮ್ಮೇಗೌಡ ಭಾಗವಹಿಸಿದ್ದರು.