ಹೈದರಾಬಾದ ಕರ್ನಾಟಕ ಪ್ರಗತಿ ಕಲ್ಯಾಣಕ್ಕೆ ಮುನ್ನುಡಿ ಬರೆದಿದ್ದ ಎಸ್.ಎಂ.ಕೃಷ್ಣ

10 Ark 02
Published on

 ಕಲಬುರಗಿ ವಿಭಾಗದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಆರಂಭಿಸಿದ್ದ  ದಿಟ್ಟ ನಾಯಕ ಎಸ್ ಎಂಕೆ  | ಶಿಕ್ಷಣದ ಅರ್ಧ ಬಜೆಟ್  ಉತ್ತರದ ಎಂಟು ಜಿಲ್ಲೆಗಳಿಗೆ ನೀಡಿದ್ದ ದಿಟ್ಟ ನಾಯಕ /   ಕಲಬುರಗಿಯ ಆರು ಜನರಿಗೆ ಸಂಪುಟದಲ್ಲಿ ಸಚಿವ ಸ್ಥಾನ ಕೊಟ್ಟಿದ್ದರು / ಧರ್ಮಸಿಂಗ್ -ಖರ್ಗೆ ಜತೆಗಿತ್ತು ಆಪ್ತ ಸ್ನೇಹ / ನಂಜುಂಡಪ್ಪ ವರದಿಗಾಗಿ ಹೈಪವರ್ ಕಮೀಟಿ 

ಬಾಬುರಾವ ಯಡ್ರಾಮಿ ಕಲಬುರಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಕಲಬುರಗಿ ಮೇಲೆ ವಿಶೇಷ ಪ್ರೀತಿಯಿತ್ತು. ಹಿಂದುಳಿದ ಹಣೆಪಟ್ಟಿ ಹೊತ್ತ ಹೈದರಬಾದ ಕರ್ನಾಟಕ (ಕಲ್ಯಾಣ ಕರ್ನಾಟಕ) ಪ್ರಗತಿಗೆ ಡಾ.ಡಿ.ಎಂ.ನಂಜುಂಡಪ್ಪ ವರದಿ ಅಂಗೀಕರಿಸುವ ಮೂಲಕ ಮುನ್ನುಡಿ ಬರೆದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅವರ ಆಪ್ತರಲ್ಲಿ ಒಬ್ಬರಾಗಿದ್ದ ಮಾಜಿ ಸಿಎಂ ಧರ್ಮಸಿಂಗ್ ಅವರೊಂದಿಗೆ ಉತ್ತಮ ಒಡನಾಟವಿತ್ತು. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಜತೆಗೂ ಒಳ್ಳೆಯ ಸ್ನೇಹವಿತ್ತು. ಹೀಗಾಗಿ ಕಲಬುರಗಿ ಅಂದರೆ ವಿಶೇಷ ಪ್ರೀತಿ ಇತ್ತು.

ಹೈದರಾಬಾದ ಕರ್ನಾಟಕ ಹಿಂದುಳಿದ ಕಾರಣಕ್ಕೆ ಈ ಭಾಗಕ್ಕೆ ಏನಾದರೂ ಮಾಡಿ ಅಭಿವೃದ್ಧಿ ಮಾಡಬೇಕು ಎಂಬ ಉದ್ದೇಶದಿಂದಲೇ ಅವರ ಸಿಎಂ ಆಗಿದ್ದಾಗಲೇ ಕಲಬುರಗಿಯಲ್ಲಿ ಹೈ ಪವರ್ ಕಮೀಟಿ ಸಭೆ ನಡೆಸಿ  ಪ್ರಾದೇಶಿಕ ಅಸಮಾನತೆ ಹಾಗೂ ಹಿಂದುಳಿಯುವಿಕೆ ಅಧ್ಯಯನ ಮಾಡಲು ಡಾ.ಡಿ.ಎಂ.ನಂಜುಂಡಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದರು. ಈಗಲೂ ನಂಜುಂಡಪ್ಪ ವರದಿ ಈ ಭಾಗಕ್ಕೆ ಪ್ರಗತಿಯ ಅಂಶ ಹೊಂದಿದ ಸಂವಿಧಾನದಂತ ವರದಿಯಾಗಿದೆ.

ಕಲಬುರಗಿ ಮೇಲೆ ಕೃಷ್ಣ ಅವರಿಗೆ ವಿಶೇಷ ಕಾಳಜಿ ಮತ್ತು ಪ್ರೀತಿಯಿತ್ತು. ಹೀಗಾಗಿ ಅವರು ಸಿಎಂ ಆಗಿದ್ದ ಕಲಬುರಗಿ ಜಿಲ್ಲೆಯ ಆರು ಜನರಿಗೆ ಸಂಪುಟದಲ್ಲಿ ಸಚಿವ ಸ್ಥಾನ ಕೊಟ್ಟಿದ್ದರು. ಪ್ರಭಾವಿ ಖಾತೆಗಳಾಗಿರುವ ಗೃಹವನ್ನು ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕೋಪಯೋಗಿಯನ್ನು ಧರ್ಮಸಿಂಗ್ ಅವರಿಗೆ ವಹಿಸಿಕೊಟ್ಟಿದ್ದರು. ಆರೋಗ್ಯ, ವಸತಿ, ಸಮಾಜ ಕಲ್ಯಾಣ,ಗ್ರಂಥಾಲಯ, ಸಣ್ಣ ಉಳಿತಾಯ,ಬಂಧಿಖಾನೆ ಸೇರಿದಂತೆ ಹಲವು ಖಾತೆಗಳನ್ನು ಕಲಬುರಗಿಯ ಜಿಲ್ಲೆಯವರಿಗೆ ನೀಡಿದ್ದರು. ಬಾಬುರಾವ ಚಿಂಚನಸೂರ ಅವರಿಗೆ ಸಪ್ತಖಾತೆಗಳನ್ನು ನೀಡುವ ಮೂಲಕ ಸಪ್ತಖಾತೆಗಳ ಸರದಾರ ಎಂದು ಕರೆಸಿಕೊಳ್ಳುವಂತೆ ಮಾಡಿದ್ದರು.

೨೦೦೦ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಹೈಪವರ್ ಕಮೀಟಿ ಸಭೆ ನಡೆಸಿ ಕಲ್ಯಾಣ ಕರ್ನಾಟಕಕ್ಕೆ ಮುನ್ನುಡಿ ಬರೆದಿದ್ದರು. ನಂಜುಂಡಪ್ಪ ವರದಿ ಅಂಗೀಕರಿಸಿ ಅದಕ್ಕಾಗಿ ಹಣ ನೀಡಲು ದಿಟ್ಟ ಹೆಜ್ಜೆ ಇಟ್ಟಿದ್ದರು. ಅಲ್ಲದೆ ಆಗ ಶಿಕ್ಷಣ ಸಚಿವರಾಗಿದ್ದ ಎಚ್.ವಿಶ್ವನಾಥ ಅವರ ನೇತೃತ್ವದಲ್ಲಿ ಕಲಬುರಗಿಯಲ್ಲಿ ಕಕ ಸೇರಿ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳ ಶಿಕ್ಷಣ ಅಧಿಕಾರಿಗಳ ಸಭೆ ನಡೆಸಿ, ಶಿಕ್ಷಣದ ಶೇ.೫೦ ರಷ್ಟು ಅನುದಾನ ಈ ಭಾಗಕ್ಕೆ ಮೀಸಲಿಡುವಂತೆ ಮಾಡಿದ್ದರು. ಖಾಲಿ ಹುದ್ದೆಗಳ ಭರ್ತಿಗೆ ಚಾಲನೆ ನೀಡಿದ್ದರು ಎಂದು ಅನೇಕ ಹಿರಿಯರು ನೆನಪಿನ ಬುತ್ತಿ ಬಿಚ್ಚಿಟ್ಟರು.

ಕಲಬುರಗಿ ಹೊರ ವಲಯದ ನಾಗನಹಳ್ಳಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಹಿಂದಿನ ಎಚ್‌ಕೆಡಿಬಿ) ಕಚೇರಿ, ಚಂಪಾ ಕ್ರೀಡಾಂಗಣದಲ್ಲಿರುವ ಟೆನ್ನಿಸ್ ಕೋಟ್ ಮೊದಲಾದವನ್ನು ಲೋಕಾರ್ಪಣೆ ಮಾಡಿದ್ದು ಎಸ್.ಎಂ.ಕೃಷ್ಣ. ಮೊದಲ ಐಟಿಎಫ್ ಪಂದ್ಯ ಕಲಬುರಗಿಯಲ್ಲಿ ನಡೆಸಲು ಸಹ ಇವರೇ ಕಾರಣರಾಗಿದ್ದರು.

ಕರ್ನಾಟಕ ತೊಗರಿ ಮಂಡಳಿಗೆ ಮೊದಲ ಸಲ ೫ ಕೋಟಿ ರೂ. ಹಣವನ್ನು ನೀಡಿ ಬಲವರ್ಧನೆಗೆ  ಈ ಭಾಗದ ತೊಗರಿ ಬೆಳೆಗಾರರ ಹಿತರಕ್ಷಣೆಗೆ ಮುಂದಾಗಿದ್ದರು. ಬೀದರ್-ಶ್ರೀರಂಗಪಟ್ಟಣ ಹೆದ್ದಾರಿಯನ್ನು ನಿರ್ಮಿಸುವ ಯೋಜನೆಯನ್ನು ಧರ್ಮಸಿಂಗ್ ಅವರ ಮೂಲಕ ಅನುಷ್ಠಾನಗೊಳಿಸಿ ಬೆಂಗಳೂರು ಇನ್ನಿತರ ಕಡೆಗೆ ಹೋಗುವ ಸಂಪರ್ಕ ರಸ್ತೆ ಸುಧಾರಿಸಿದರು. ನಂತರದ ದಿನಗಳಲ್ಲಿ ಎಸ್.ಎಂ.ಕೃಷ್ಣ ಅವರ ಉತ್ತರಾಧಿಕಾರಿಯಾಗಿ ಧರ್ಮಸಿಂಗ್ ಸಿಎಂ ಆದರು.

ಎಸ್.ಎಂ.ಕೃಷ್ಣ ನಿಧನಕ್ಕೆ ಗಣ್ಯರ ಸಂತಾಪ

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಮುಖ್ಯಮಂತ್ರಿಗಳ ಸಲಹೆಗಾರರಾದ ಬಿ.ಆರ್.ಪಾಟೀಲ್,ಶಾಸಕರಾದ ಅಲ್ಲಮಪ್ರಭು ಪಾಟೀಲ್ ನೆಲೋಗಿ, ಎಂ.ವೈ.ಪಾಟೀಲ್, ಜಗದೇವ ಗುತ್ತೇದಾರ, ಡಾ.ಬಿ.ಜಿ.ಪಾಟೀಲ್, ಕನ್ನಿಜ್ ಫಾತಿಮಾ, ಸಂಸದ ರಾಧಾಕೃಷ್ಣ ದೊಡ್ಡಮನಿ, ಮಾಜಿ ಸಂಸದ ಡಾ.ಉಮೇಶಜಾಧವ, ಮಾಜಿ ಸಚಿವರಾದ ಎಸ್.ಕೆ.ಕಾಂತಾ, ಮಾಲೀಕಯ್ಯ ಗುತ್ತೇದಾರ,  ಬಾಬುರಾವ ಚವ್ಹಾಣ,ಬಾಬುರಾವ ಚಿಂಚನಸೂರ, ಕಾಂಗ್ರೆಸ್ ಮುಖಂಡರಾದ ಡಾ.ಎಸ್.ಬಿ.ಕಾಮರಡ್ಡಿ, ಜೆಡಿಎಸ್ ಮುಖಂಡ ದೇವೇಗೌಡ ತೆಲ್ಲೂರ, ಬಿಜೆಪಿ ಮುಖಂಡ ನಿತಿನ್ ಗುತ್ತೇದಾರ,   ಕರ್ನಾಟಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ಡಾ.ಮಹೇಶ ಗಂವ್ಹಾರ ಮೊದಲಾದವರು ಶೋಕ ವ್ಯಕ್ತಪಡಿಸಿದ್ದಾರೆ.

ನಾಡಿನ ಪ್ರಗತಿಗೆ ಅನುಪಮ ಕೊಡುಗೆ

ಸಿಎಂ ಸೇರಿ ರಾಜ್ಯ ಕೇಂದ್ರದಲ್ಲಿ ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಮಾಜಿ ರಾಜ್ಯಪಾಲರಾದ ಎಸ್.ಎಂ.ಕೃಷ್ಣ ಅವರು ನಾಡಿನ ಪ್ರಗತಿಗೆ ಅನುಪಮ ಕೊಡುಗೆ ನೀಡಿದ ಹಿರಿಯ ಮುತ್ಸದಿ. ಪ್ರಗತಿಯ ಚಿಂತಕರಾಗಿದ್ದ ಅವರ ಅಗಲಿಕೆಯಿಂದ ಬಹಳ ದುಃಖವಾಗಿದೆ. ನಮ್ಮ ತಂದೆ ಧರ್ಮಸಿಂಗ್ ಅವರೊಂದಿಗೆ ಉತ್ತಮ ಸ್ನೇಹ ಹೊಂದಿದ್ದರು. ಹಿರಿಯ ಚೇತನಕ್ಕೆ ಚಿರಶಾಂತಿ ಸಿಗಲಿ. ದುಃಖ ಸಹಿಸುವ ಶಕ್ತಿ ಅವರ ಕುಟುಂಬಕ್ಕೆ ಭಗವಂತ ನೀಡಲಿ.

| ಡಾ.ಅಜಯ ಧರ್ಮಸಿಂಗ್ ಕೆಕೆಆರ್‌ಡಿಬಿ ಅಧ್ಯಕ್ಷ

ದೂರದೃಷ್ಟಿಯ ನಾಯಕರಾಗಿದ್ದರು

ಎಸ್.ಎಂ.ಕೃಷ್ಣ ನಿಧನದಿಂದ ಒಳ್ಳೆಯ ನಾಯಕನ ಕಳೆದುಕೊಂಡAತೆ ಆಗಿದೆ. ಸಾರ್ವಜನಿಕ ಸೇವೆ ಮತ್ತು ನಾಯಕತ್ವದ ಪರಂಪರೆ ಮೇಲೆ ಅಳಿಸಲಾಗದ ಛಾಯೆ ಮೂಡಿಸಿದೆ. ಬೆಂಗಳೂರು ಜಾಗತಿಕ ನಗರವಾಗಿ ಬೆಳೆಯಲು ಅವರ ಕೊಡುಗೆ ಅಪಾರವಾಗಿದೆ. ದೂರದೃಷ್ಟಿಯ ನಾಯಕರಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ.

| ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ

ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ ನಾಯಕ

ಎಸ್‌ಎಂಕೆ ಅದ್ಭುತ ಆಡಳಿತಗಾರರಾಗಿದ್ದರು.ವಿದೇಶದಲ್ಲಿ ಕಲಿತರು ಸರಳ ವ್ಯಕ್ತಿಯಾಗಿದ್ದರು. ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ ನಾಯಕರಾಗಿದ್ದರು. ತೊಗರಿ ಮಂಡಳಿ ಬಲಪಡಿಸಲು, ಈ ಭಾಗದ ಪ್ರಗತಿಗೆ ಹೆಚ್ಚಿನ ಒತ್ತು ನೀಡಿದ್ದರು. ಅವರ ಅಗಲಿಕೆಯಿಂದ ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡAತೆ ಆಗಿದೆ.

| ಡಾ.ಎಸ್.ಬಿ.ಕಾಮರಡ್ಡಿ ಕಾಂಗ್ರೆಸ್ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net