ಹೀಗೂ ಆಗತ್ತಾ? ತನ್ನ ವೋಟನ್ನು ತಾನೇ ಹಾಕದ ಅಭ್ಯರ್ಥಿ!

mata2
Published on

ನೆಲಮಂಗಲ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಲವಾರು ಕುತೂಹಲಗಳು ನಡೆದಿವೆ. ಇಂದು ನಡೆಯುತ್ತಿರುವ ಮತ ಎಣಿಕೆ ವೇಳೆ ಕೆಲವು ಸ್ಥಳಗಳಲ್ಲಿ ಅಚ್ಚರಿ ಎನಿಸುವಂಥ ವಿಷಯಗಳು ನಡೆದಿವೆ. ಕೆಲವು ಕಡೆಗಳಲ್ಲಿ ಅತ್ಯಂತ ಹಾಸ್ಯದ ಸನ್ನಿವೇಶಗಳೂ ನಡೆದಿದ್ದರೆ, ಕೆಲವು ವಾರ್ಡ್​ಗಳಲ್ಲಿ ದುರ್ಘಟನೆಗಳೂ ನಡೆದಿವೆ.

ಆದರೆ ತೀರಾ ಅಪರೂಪ ಎನ್ನುವಂಥ ಘಟನೆಗೆ ಸಾಕ್ಷಿಯಾಗಿದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅರೆಬೊಮ್ಮನಹಳ್ಳಿಯ ಗೋವಿಂದಪುರ ಕ್ಷೇತ್ರ.

ಮತಗಟ್ಟೆ 153ರಲ್ಲಿ ನಾಲ್ಕು ಮಂದಿ ಅಭ್ಯರ್ಥಿಗಳು ನಿಂತಿದ್ದರು. ಈ ಪೈಕಿ ಜಬಿಉಲ್ಲಾ ಬಾಗ್​ 129 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಸೈಯದ್​ ಅಬ್ದುಲ್ಲಾ ಎನ್ನುವವರು 95 ಮತ, ಸೈಯದ್​ ಖಜರ್​ ಎನ್ನುವವರು 33 ಮತ ಪಡೆದಿದ್ದಾರೆ.

ಇದರಲ್ಲೇನೂ ಅಚ್ಚರಿ ಇಲ್ಲ. ಆದರೆ ಇನ್ನೋರ್ವ ಅಭ್ಯರ್ಥಿ ಹಬೀದ್​ ಉಲ್ಲಾ ಎನ್ನುವವರು ಜೀರೋ ಮತ ಪಡೆದಿದ್ದಾರೆ! ಇದರ ಅರ್ಥ ತಮ್ಮ ಮತವನ್ನು ತಾವೇ ಹಾಕಿಕೊಳ್ಳಲಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗಿದೆ. ಈ ವಾರ್ಡ್​ನಲ್ಲಿ 259 ಮಂದಿ ಮತದಾನ ಮಾಡಿದ್ದು, ಒಂದು ಮತ ತಿರಸ್ಕೃತಗೊಂಡಿದೆ.

ಆ ತಿರಸ್ಕೃತಗೊಂಡಿರುವ ಮತ ಹಬೀದ್​ ಉಲ್ಲಾ ಅವರದ್ದೇ ಅಥವಾ ತಮ್ಮ ಮತವನ್ನು ಅವರು ತಮಗೇ ಹಾಕಿಕೊಳ್ಳಲು ಮರೆತರೆ ಎನ್ನುವುದು ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ ಅವರಿಗೆ ಜೀರೋ ಮತಬಿದ್ದಿರುವುದು ಅಚ್ಚರಿಗೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net