

ವಿಜಯವಾಣಿ ಸುದ್ದಿಜಾಲ ಉಡುಪಿ
ಕನ್ನಡದ ಸಾಹಿತ್ಯ ಕ್ಷೇತ್ರದಲ್ಲಿ ಎಸ್.ಎಲ್. ಭೈರಪ್ಪ ಅವರು ಮೇರು ಪರ್ವತ, ಶ್ರೇಷ್ಠ ಪ್ರತಿಭೆ. ಅವರ ಜನಪ್ರಿಯ ಕಾದಂಬರಿಗಳು ಬಹುಭಾಷೆಯಲ್ಲಿ ಅನುವಾದಗೊಂಡು ವಿಶ್ವವಿಖ್ಯಾತವಾಗಿದೆ. ದೇಹದಿಂದ ನಮ್ಮನ್ನೆಲ್ಲ ಅಗಲಿದ್ದರೂ ರಚಿಸಿದ ಕೃತಿಗಳಲ್ಲಿ ಅಜರಾಮರರಾಗಿದ್ದಾರೆ ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ಅಧ್ಯಕ್ಷ ಶ್ರೀನಿವಾಸ ರಾವ್ ಕೆ. ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಕಾತ್ಯಾಯಿನಿ ನಗರದಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಶನಿವಾರ (ಸೆ.27) ಆಯೋಜಿಸಿದ್ದ ಎಸ್.ಎಲ್. ಭೈರಪ್ಪ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೇದಿಕೆಯ ಸದಸ್ಯ ಸುರೇಶ ಡಿ. ಮಾತನಾಡಿ, ಎಸ್.ಎಲ್. ಭೈರಪ್ಪ ಅವರು ಕಾದಂಬರಿಗಳ ಮೂಲಕವೇ ಖ್ಯಾತರಾಗಿದ್ದು, ಬೃಹತ್ ಓದುಗ ವರ್ಗವೇ ಇದೆ. ಅವರ ನಡೆ-ನುಡಿ, ಬರಹ ಒಂದೇ ಆಗಿತ್ತು. ಭೈರಪ್ಪ ಅವರ ಸಾಹಿತ್ಯ ಸಾಧನೆಗೆ ಜ್ಞಾನಪೀಠ ಪ್ರಶಸ್ತಿ ಲಭಿಸಬೇಕಿತ್ತು. ಈಗಲೂ ಸಹ ಅವರಿಗೆ ಮರಣೋತ್ತರ ಜ್ಞಾನಪೀಠ ಪ್ರಶಸ್ತಿ ಕೊಡಲು ಸರ್ಕಾರ ಮನಸ್ಸು ತೋರಬೇಕು ಎಂದರು.
ವೇದಿಕೆಯ ಸದಸ್ಯೆ ಅನುರಾಧಾ ಜಿ.ಎಸ್. ಮಾತನಾಡಿದರು. ಕಾರ್ಯಕ್ರಮದಲ್ಲಿ ಸದಸ್ಯರಾದ ಸಹನಾ, ಸುನೀತಾ, ಸಂಗೀತಾ, ರೇಣುಕಾ, ವಿದ್ಯಾ, ವಿಜಯ, ವಾಸು ಪಿ., ರಾಘವೇಂದ್ರ, ರಮಾನಂದ, ಹೇಮಲತಾ, ಲಕ್ಷ್ಮೀ, ವಿಜಯಲಕ್ಷ್ಮೀ, ಕೃಷ್ಣ ಕೆ., ಚಂದ್ರಶೇಖರ, ಅಶೋಕ ಇತರರು ಉಪಸ್ಥಿತರಿದ್ದರು.