ದೆಹಲಿಯಲ್ಲಿ ಡಾ.ಎಸ್.ಎಲ್.ಭೈರಪ್ಪರಿಗೆ ಶ್ರದ್ಧಾಂಜಲಿ

Sahithya Academi
Published on

ಬೆಂಗಳೂರು: ಇತ್ತೀಚೆಗೆ ನಿಧನರಾದ ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರಿಗೆ ನವದೆಹಲಿಯಲ್ಲಿ ಸಾಹಿತ್ಯ ಅಕಾಡೆಮಿ ಕೇಂದ್ರ ಕಚೇರಿಯ ರವೀಂದ್ರ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಕಾಡೆಮಿ ಅಧ್ಯಕ್ಷ ಡಾ. ಮಾಧವ ಕೌಶಿಕ, ಕಾರ್ಯದರ್ಶಿ ಡಾ.ಕೆ. ಶ್ರೀನಿವಾಸ ರಾವ್, ಕರ್ನಾಟಕದ ಸದದ್ಯರಾದ ಡಾ. ಬಸವರಾಜ ಸಾದರ, ಡಾ. ಮನು ಬಳಿಗಾರ್ ಹಾಗೂ ಇತರ ರಾಜ್ಯಗಳ ಅಕಾಡೆಮಿ ಸದಸ್ಯರು ಪಾಲ್ಗೊಂಡಿದ್ದರು.

ಡಾ. ಬಸವರಾಜ ಸಾದರ ಮಾತನಾಡಿ, ಭೈರಪ್ಪ ಅವರ ಬಾಲ್ಯ ಕಷ್ಟದಿಂದ ಕೂಡಿತ್ತು. ವಾರಾನ್ನ ಉಂಡು ವಿದ್ಯಾಭ್ಯಾಸ ಮಾಡಿದ ದಿನಗಳು, ಸಿನಿಮಾ ಥಿಯೇಟರ್‌ನ ಗೇಟ್ ಕೀಪರ್ ಆಗಿದ್ದು, ನಾಟಕ ಕಂಪನಿಯ ಲೆಕ್ಕ ಬರೆಯುವ ಕೆಲಸ ಮಾಡಿದ್ದು, ರೈಲು ನಿಲ್ದಾಣದಲ್ಲಿ ಕೂಲಿ ಮಾಡಿದ್ದು ಸೇರಿ ಅವರ ಪಟ್ಟ ಶ್ರಮದ ದಿನಗಳನ್ನು ಸ್ಮರಿಸಿದರು.

ಈ ಎಲ್ಲ ಕಷ್ಟಗಳ ನಡುವೆಯೂ ಅವರು ಓದುವ ಹಂಬಲವೊಂದನ್ನೇ ಇಟ್ಟುಕೊಂಡ ಕಾರಣಕ್ಕಾಗಿ ಮಹತ್ವದ ಸಾಧಕರಾಗಿ ಹಾಗೂ ಕನ್ನಡದ ಶ್ರೇಷ್ಠ ಕಾದಂಬರಿಕಾರರಾಗಿ ಬೆಳೆದರು. ಸತ್ಯ ಮತ್ತು ಸೌಂದರ್ಯಗಳಲ್ಲಿ ತಮಗೆ ಹೆಚ್ಚು ವಿಸ್ವಾಸವಿರುವುದು ಸತ್ಯದ ಬಗೆಗೆ ಎಂದು ಸ್ಷಷ್ಟವಾಗಿ ಹೇಳುತ್ತಿದ್ದ ಭೈರಪ್ಪನವರು ತಮ್ಮ ಕೃತಿಗಳಿಗೆ ವೈದಿಕ ಸಾಹಿತ್ಯ ಹಾಗೂ ರಾಮಾಯಣ ಮಹಾಭಾರತಗಳು ಮಹತ್ವದ ಪ್ರೇರಣೆ ನೀಡಿವೆ. 25ಕ್ಕೂ ಹೆಚ್ಚು ಕಾದಂಬರಿಗಳಲ್ಲಿ ಹೆಚ್ಚಿನವು ಭಾರತೀಯ ಎಲ್ಲ ಭಾಷೆಗಳಲ್ಲಿ ಹಾಗೂ ವಿದೇಶದ 20 ಭಾಷೆಗಳಲ್ಲಿ ಅನುವಾದಗೊಂಡಿವೆ ಎಂದು ಹೇಳಿದರು.

ಡಾ. ಮನು ಬಳಿಗಾರ ಮಾತನಾಡಿ, ತಾವು ಆಯುಕ್ತರಾಗಿದ್ದಾಗ ಎಸ್.ಎಲ್. ಭೈರಪ್ಪ ಅವರಿಗೆ ಸರಸ್ವತಿ ಸಮ್ಮಾನ ಪ್ರಶಸ್ತಿ ಬಂದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಕೊಡಮಾಡಿದ ಐದು ಲಕ್ಷ ರೂಪಾಯಿಗಳ ಹಮ್ಮಿಣಿಯನ್ನು ಸರ್ಕಾರಕ್ಕೆ ಹಿಂದಿರುಗಿಸಿದ ಸಂದರ್ಭವನ್ನು ಪ್ರಸ್ತಾಪಿಸಿ, ಆ ಹಣವನ್ನು ಕನ್ನಡ ಶಾಲೆಗಳ ಅಭಿವೃದ್ಧಿಗೆ ಬಳಸಲು ಸೂಚಿಸಿದರು. ಸರ್ಕಾರ ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಅವರನ್ನು ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಕೇಳಿದಾಗ, ಲೇಖಕನೊಬ್ಬನನ್ನು ಆತನ ಬರವಣಿಗೆಯ ಮೂಲಕ ಗೌರವಿಸಬೇಕೇ ಹೊರತು ಯಾವುದೇ ಹುದ್ದೆಯಿಂದಲ್ಲ ಎಂದು ತಮಗೆ ಒದಗಿ ಬಂದ ಅವಕಾಶವನ್ನು ನಯವಾಗಿ ತಿರಸ್ಕರಿಸಿದರು. ಇನ್ನು ತಮ್ಮ ಗ್ರಂಥಗಳಿಗೆ ಬಂದ ಗೌರವಧನವನ್ನು ತಮ್ಮ ಹೆಸರಿನ ಪ್ರತಿಷ್ಠಾನಕ್ಕೆ ಸಲ್ಲಬೇಕು. ಅದು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಳಕೆಯಾಗಬೇಕು ಎಂದು ಹೇಳಿದ್ದನ್ನು ಸ್ಮರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net