ಕಚೇರಿಯಲ್ಲಿಯೇ ಕಿಸ್​ ಕೊಟ್ಟು ಕೆಲಸ ಕಳೆದುಕೊಂಡ ಕೊಪ್ಪಳ ತಹಶೀಲ್ದಾರ್​!

tahashildar1
Published on

ಕುಷ್ಟಗಿ: ಕೊಪ್ಪಳ ನಗರಾಭಿವೃದ್ಧಿ ಕೋಶ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಗುರುಬಸವರಾಜ್‌ ಎರಡು ತಿಂಗಳ ಹಿಂದೆ ಕುಷ್ಟಗಿ ತಹಶೀಲ್ದಾರರಾಗಿದ್ದ ವೇಳೆ ಕಚೇರಿಯಲ್ಲಿ ನಡೆಸಿದ್ದ ಕಿಸ್ಸಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತು ಮಾಡಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಎರಡು ತಿಂಗಳ ನಂತರ ಈ ಪ್ರಕರಣ ಬೆಳಕಿಗೆ ಬಂದು ಇದರ ವಿಡಿಯೋ ಸಾಕಷ್ಟು ವೈರಲ್‌ ಆಗಿತ್ತು.

ತಮ್ಮ ಕಚೇರಿಯ ಮಹಿಳಾ ಸಿಬ್ಬಂದಿಗೆ ಕಚೇರಿಯ ಒಳಗೇ ಮುತ್ತುಕೊಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಗುರುಬಸವರಾಜ್ ಕುಷ್ಟಗಿ ತಹಶೀಲ್ದಾರ್ ಆಗಿದ್ದ ಅವಧಿಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿಂದ ವರ್ಗಾವಣೆಯಾಗಿ ಈಗ ಅವರು ಕೊಪ್ಪಳ ನಗರಾಭಿವೃದ್ಧಿ ಕೋಶದಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈಗ ಅವರನ್ನು ಅಮಾನತು ಮಾಡಲಾಗಿದೆ.

ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ಮಹಿಳೆ ದೂರು ದಾಖಲಿಸಿದ್ದು ನ್ಯಾಯ ದೊರಕಿಸಿಕೊಡುವಂತೆ ಬೇಡಿಕೊಂಡಿದ್ದರು. ಗುರುಬಸವರಾಜ್ ಕುಷ್ಟಗಿ ತಹಶೀಲ್ದಾರ್ ಆಗಿ ಬಂದಾಗಿನಿಂದ ನನ್ನೊಂದಿಗೆ ಅಸಭ್ಯ ವರ್ತನೆ ತೋರುತ್ತಿದ್ದ. ಪ್ರತಿನಿತ್ಯ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ ಎಂದು ನೊಂದ ಮಹಿಳೆ ಪ್ರಕರಣದಲ್ಲಿ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು.

ದೂರು ದಾಖಲಿಸಿ ಕೊಂಡ ಕುಷ್ಟಗಿ ಪೊಲೀಸರು ಐಪಿಸಿ ಕಲಂ 354(ಸ್ತ್ರೀ ಕಿರಿಕಿರಿ) 354(ಬಿ), 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡಿದ್ದಾರೆ.

ಉನ್ನತ ಸ್ಥಾನದಲ್ಲಿರುವ ಅಧಿಕಾರಿಯೇ ತಮ್ಮ ಕಚೇರಿಯಲ್ಲಿ ಈ ರೀತಿ ಮಾಡಿ ಹುದ್ದೆಯ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿರುವ ಸಾರ್ವಜನಿಕರು, ಇವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net