

ಬೆಂಗಳೂರು: ರೈತರ ಆರ್ಥಿಕಾಭಿವೃದ್ಧಿಯ ನಿಟ್ಟಿನಲ್ಲಿ ರೈತರಿಂದ ಖರೀದಿಸುವ ನಂದಿನಿ ಹಾಲಿನ ಬೆಲೆಯನ್ನು ಪ್ರತಿ ಲೀಟರ್ಗೆ 3 ರೂ. ಹೆಚ್ಚಳ ಮಾಡಲು ಕೆಎಂಎಫ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಇದರಿಂದ ಗ್ರಾಹಕರಿಗೆ ಯಾವುದೇ ಹೆಚ್ಚಿನ ಹೊರೆಯಾಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಕಳೆದ ಶುಕ್ರವಾರದಂದು ಬೆಂಗಳೂರಿನ ಹೊಟೇಲ್ ಒಂದರಲ್ಲಿ ಜರುಗಿದ ಕೆಎಂಎಫ್‍ನ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಂಡಿದ್ದು, ಕೆಎಂಎಫ್‍ನ ಎಲ್ಲ 14 ಜಿಲ್ಲಾ ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಳ ಮಾಡುವುದರ ಬಗ್ಗೆ ಒಲುವು ತೋರಿವೆ ಎಂದು ಹೇಳಲಾಗುತ್ತಿದೆ.
ಹಾಲಿನ ದರ ಹೆಚ್ಚಳ ಮಾಡುವಂತೆ ಕಳೆದ 8 ತಿಂಗಳುಗಳಿಂದ ರಾಜ್ಯದ ಜಿಲ್ಲಾ ಹಾಲು ಒಕ್ಕೂಟಗಳು ಕೆಎಂಎಫ್‍ಗೆ ಒತ್ತಡ ಹೇರುತ್ತಿದ್ದವು. ಈ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಆದರೆ ಹಾಲಿನ ದರ ಹೆಚ್ಚಳಕ್ಕೆ ಸರ್ಕಾರ ಸೂಕ್ತವಾಗಿ ಸ್ಪಂದನೆ ನೀಡಿರಲಿಲ್ಲ. ಆದರೆ ಇದೀಗ ರೈತರ ಅನುಕೂಲಕ್ಕೋಸ್ಕರ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ.
ದೇಶದಲ್ಲಿ ಕೆಎಂಎಫ್ ಹೊರತುಪಡಿಸಿ ಉಳಿದೆಲ್ಲ ಬೇರೆ ಬೇರೆ ಖಾಸಗಿ ಬ್ರ್ಯಾಂಡ್‍ಗಳು ಹಾಲಿನ ದರದಲ್ಲಿ ಭಾರಿ ಬದಲಾವಣೆ ಮಾಡಿವೆ. ಕೆಎಂಎಫ್ ಮಾತ್ರ ಪ್ರತಿ ಲೀಟರ್ ಹಾಲಿಗೆ 37 ರೂ.ಗಳನ್ನು ನೀಡುತ್ತಿದೆ. ಬೇರೆ-ಬೇರೆ ಬ್ರ್ಯಾಂಡ್‍ಗಳಿಗೆ ಹೋಲಿಕೆ ಮಾಡಿದರೆ 8 ರಿಂದ 10 ರೂ.ಗಳು ವ್ಯತ್ಯಾಸ ಕಂಡುಬರುತ್ತಿವೆ. ಈ ಹಿನ್ನೆಲೆಯಲ್ಲಿ ರೈತರ ಹಿತಕ್ಕಾಗಿ ನಂದಿನಿ ಹಾಲಿನ ದರದಲ್ಲಿಯೂ ಏರಿಕೆ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.
ದಕ್ಷಿಣ ಭಾರತದಲ್ಲಿ ವಿಪರೀತ ಮಳೆಯಾಗುತ್ತಿರುವ ಕಾರಣದಿಂದಾಗಿ ರೈತರ ಬೆಳೆಗಳು ಹಾನಿಗೊಳಗಾಗಿವೆ. ಹೈನುಗಾರಿಕೆಯನ್ನೇ ಅವಲಂಬಿಸಿರುವ ರೈತರಿಗೆ ನಂದಿನಿ ವರದಾನವಾಗಿದ್ದು, ಅವರನ್ನು ಉತ್ತೇಜಿಸಲು ಹಾಗೂ ಹೈನುಗಾರಿಕೆಗೆ ಪ್ರೋತ್ಸಾಹ ನೀಡಲು ಅವರಿಂದ ಖರೀದಿಸುವ ಹಾಲಿನ ದರದಲ್ಲಿ ಏರಿಕೆ ಮಾಡುವುದು ಅನಿವಾರ್ಯವಾಗಿದೆ.