ಹಿಜಾಬ್‌, ಕೇಸರಿ ಸಂಘರ್ಷದ ನಡುವೆ ‘ಕುಂಕಮ’ಕ್ಕೆ ಸಂಕಷ್ಟ: ಶುರುವಾಯ್ತು ಸಿಂಧೂರ ಚಳವಳಿ

sindhura
Published on

ಕಲಬುರಗಿ: ಕೆಲ ದಿನಗಳಿಂದ ಹಿಜಾಬ್‌ ಗಲಾಟೆಗೆ ಉತ್ತರವಾಗಿ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು. ಹೈಕೋರ್ಟ್‌ ಆದೇಶದ ನಂತರ ಹಿಜಾಬ್‌ ಧರಿಸುವುದು ಮುಂದುವರೆದರೂ ಹಲವು ಶಾಲಾ-ಕಾಲೇಜುಗಳಲ್ಲಿ ಕೇಸರಿ ಮಾಯವಾಯಿತು. ಆದರೆ ಇವೆರಡರ ನಡುವೆ ಸಂಕಷ್ಟಕ್ಕೆ ಒಳಗಾಗಿದ್ದು ಕುಂಕುಮ.

ಹಿಂದೂ ವಿದ್ಯಾರ್ಥಿನಿಯರು ಕುಂಕುಮ ಹಚ್ಚಿಕೊಂಡು ಬರೋದು ಬಿಟ್ಟರೆ ನಾವು ಹಿಜಾಬ್ ಹಾಕೋದು ಬಿಡುತ್ತೇವೆ ಎಂದು ಯಾರೋ ಹೇಳಿಕೊಟ್ಟ ಮಾತನ್ನು ಹಲವು ಮುಸ್ಲಿಂ ವಿದ್ಯಾರ್ಥಿನಿಯರು ಹೇಳಿ ಗಲಾಟೆ ಎಬ್ಬಿಸುತ್ತಿದ್ದಾರೆ. ಶಾಲಾ ವಿದ್ಯಾರ್ಥಿಯೊಬ್ಬ ಕುಂಕುಮ ಧರಿಸಿ ಬಂದಿರುವ ಕಾರಣಕ್ಕೆ ಖುದ್ದು ಶಿಕ್ಷಕರೇ ಆತನ ವಿರುದ್ಧ ರೇಗಿರುವ ಘಟನೆಯೂ ನಡೆದೇ ಹೋಯ್ತು.

ಆದರೆ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಕುಂಕುಮಕ್ಕೆ ಈ ರೀತಿ ಅವಹೇಳನ ಆಗುತ್ತಿರುವುದನ್ನು ತಪ್ಪಿಸುವ ಸಲುವಾಗಿ ಕಲಬುರಗಿಯ ಐತಿಹಾಸಿಕ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಿಂದೂಪರ ಸಂಘಟನೆಯ ಮಹಿಳೆಯರಿಂದ ಸಿಂಧೂರ ಚಳವಳಿ ಆರಂಭಿಸಿದ್ದಾರೆ.

ಹಿಂದೂ ಪರ ಸಂಘಟನೆಯ ಕಾರ್ಯಕರ್ತೆ, ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ನೇತೃತ್ವದಲ್ಲಿ ಈ ಚಳವಳಿ ಆರಂಭವಾಗಿದೆ. ಹಿಂದೂ ಸಂಸ್ಕೃತಿಯ ಪ್ರಕಾರ ಮಹಿಳೆಯರಿಗೆ ಕೇಸರಿ ಶಾಲು ಹಾಕಿ, ಅರಿಶಿಣ, ಕುಂಕುಮ ಹಚ್ಚಿ, ಬಳೆ ಕೊಟ್ಟು, ಹೂವು ನೀಡಿ ಸಿಂಧೂರ ಚಳವಳಿಗೆ ಇಂದು ಚಾಲನೆ ನೀಡಲಾಗಿದೆ.

ಮುಂಬರುವ ದಿನಗಳಲ್ಲಿ ಸಿಂಧೂರ ಚಳವಳಿ ಇನ್ನೂ ಅನೇಕ ದೇವಾಲಯಗಳಲ್ಲಿ ನಡೆಯಲಿದೆ. ಇದು ಭಾರತೀಯ ಸಂಸ್ಕೃತಿಯ ಸಂಕೇತ ಎಂದು ದಿವ್ಯಾ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net