ಧಾರ್ಮಿಕ ನೆಲೆಗಟ್ಟಿನಲ್ಲಿ ಆರ್ಥಿಕ ವ್ಯವಹಾರದಿಂದ ಶ್ರೇಯಸ್ಸು

udp-23-goldsmith
Published on

ಉಡುಪಿ: ಮನುಷ್ಯ ಹಣವನ್ನು ಜೋಪಾನವಾಗಿಟ್ಟುಕೊಂಡು ಸಮಯೋಚಿತವಾಗಿ ಉಪಯೋಗಿಸಬೇಕು. ಅದಕ್ಕಾಗಿಯೇ ಹಿರಿಯರು ಈ ಸಂಸ್ಥೆ ಹುಟ್ಟುಹಾಕಿದ್ದಾರೆ. ಚತುರ್ವಿಧ ಪುರುಷಾರ್ಥಗಳಿಂದ ಜೀವನ ಸಾರ್ಥ್ಯಕ್ಯವಾಗುತ್ತದೆ. ಅರ್ಥವನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಉಪಯೋಗ ಮಾಡಿದಾಗ ಶ್ರೇಯಸ್ಸು ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ. ಅನ್ಯದೇಶಗಳಲ್ಲಿ ಶ್ರೀಮಂತಿಕೆ ಮಾತ್ರ ಕಾಣಬಹುದು. ಆದರೆ ಭಾರತದ ಅಧ್ಯಾತ್ಮಿಕ ಚಿಂತನೆ ಬೇರೆಲ್ಲೂ ನೋಡಲು ಸಾಧ್ಯವಿಲ್ಲ ಎಂದು ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿದರು.

ಸೋಮವಾರ ಹಿರಿಯಡ್ಕದಲ್ಲಿ ಎಸ್​.ಕೆ. ಗೋಲ್ಡ್​ಸ್ಮಿತ್ಸ ಇಂಡಸ್ಟ್ರೀಯಲ್​ ಕೋ-ಆಪರೇಟಿವ್​ ಸೊಸೈಟಿ 17ನೇ ಬ್ಯಾಂಕಿಂಗ್​ ಶಾಖೆ ಉದ್ಘಾಟಿಸಿ ಅಶೀರ್ವಚನ ನೀಡಿದರು.

ಆನೆಗುಂದಿ ಮಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, ಮಠದಲ್ಲಿ ಜ.6ರಿಂದ 12ರವರೆಗೆ ಕೋಟಿ ಕುಂಕುಮಾರ್ಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಸ್ತ ಹಿಂದೂ ಬಾಂಧವರು ಇದರಲ್ಲಿ ಪಾಲ್ಗೊಳ್ಳಬೇಕು. ಹಿಂದುಗಳ ಮೇಲಿನ ದೌರ್ಜನ್ಯ ದೂರೀಕರಣ ಹಾಗೂ ಹಿಂದೂ ಸಮಾಜದ ಏಳೆಗಾಗಿ ಅಮ್ಮನ ಅನುಗ್ರಹಕ್ಕಾಗಿ ಅಮ್ಮನ ಬಳಿ ಪ್ರಾರ್ಥನೆ ಸಲ್ಲಿಸಲಾಗುವುದು ಎಂದರು.

ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಮಾತನಾಡಿ, ಯಾವುದೇ ಸಂಸ್ಥೆಗಳು ಸಮಾಜಮುಖಿ ಒಲವು ಬೆಳೆಸಿಕೊಂಡಾಗ ಉತ್ತಮ ಬೆಳವಣಿಗೆ ದಾಖಲಿಸಲು ಸಾಧ್ಯ. ಈ ಸಂಸ್ಥೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ಕೆಲಸ ಮಾಡುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್​ ಗಳಿಗಿಂತ ಸೊಸೈಟಿಗಳಿಗೆ ಸ್ಥಳಿಯರೊಂದಿಗೆ ಆತ್ಮೀಯ ಸಂಬಂಧವಿರುತ್ತದೆ ಎಂದರು.

ಸೊಸೈಟಿ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಾಯ ಕೇಳುವುದಕ್ಕೆ ಬಂದಾಗ ಹೆಗಲು ಆಗುವ ಅವಕಾಶ ನೀಡಬೇಕು. ಅಂತಹ ಸೇವೆ ನೀಡುವ ಸಿಬ್ಬಂದಿ ನಮ್ಮಲ್ಲಿ ಇದ್ದಾರೆ. ಹೀಗಾಗಿ ಸಂಸ್ಥೆ ಬೆಳೆಯುತ್ತಿದೆ. ನಿವೃತ್ತ ಸಿಬ್ಬಂದಿ ಕಲ್ಯಾಣ ನಿಧಿ ಸ್ಥಾಪಿಸಿ ಪ್ರತಿ ತಿಂಗಳು ಪಿಂಚಣಿ ಹಣ ಸಂದಾಯ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಪ್ರಧಾನ ಕಚೇರಿಯನ್ನು ಆಧುನಿಕ ಶೈಲಿಯಲ್ಲಿ ನಿಮಾರ್ಣ ಮಾಡಲಾಗುವುದು ಎಂದರು.

ಸಹಕಾರಿ ಯೂನಿಯನ್​ ಜಿಲ್ಲಾಧ್ಯಕ್ಷ ಬಿ. ಜಯಕರ್​ ಶೆಟ್ಟಿ ಇಂದ್ರಾಳಿ, ಸಹಕಾರಿ ಸಂಗಳ ಉಪನಿಬಂಧಕಿ ಲಾವಣ್ಯ ಆರ್​.ಕೆ., ವೇಣುಗಿರಿ ದೇವಸ್ಥಾನ ಮೊಕ್ತೇಸರ ಮುರಹರಿ ಕೆ. ಆಚಾರ್ಯ, ಡಾ. ದೇವದಾಸ್​ ಕಾಮತ್​, ಬೊಮ್ಮರಬೆಟ್ಟು ಗ್ರಾಪಂ ಅಧ್ಯೆ ಜಯಂತಿ, ರೈತ ಸೇವಾ ಸಹಕಾರಿ ಸಂದ ಅಧ್ಯಕ್ಷ ಅಶೋಕ್​ ಶೆಟ್ಟಿ, ಉದ್ಯಮಿ ನಟರಾಜ ಹೆಗ್ಡೆ, ಎ. ರವಿ ಪೂಜಾರಿ, ಸತ್ಯಪ್ರಸಾದ್​ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಾಟಿ ವೈದ್ಯೆ ಪದ್ಮಾವತಿ ಆಚಾರ್ಯ ಅವರಿಗೆ ಸನ್ಮಾನ ನೆರವೇರಿತು. ಉಪಾಧ್ಯಕ್ಷ ಆನಂದ ಆಚಾರ್ಯ ಸ್ವಾಗತಿಸಿ, ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಪ್ರಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಪ್ರಕಾಶ್​ ಆಚಾರ್ಯ ವಂದಿಸಿದರು. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net