

ಭಟ್ಕಳ: ಸದ್ಯ ಎಲ್ಲೆಲ್ಲೂ ಮಾಸ್ಕ್ಗಳದ್ದೇ ಮಾತು. ಮಾಸ್ಕ್ ಧರಿಸುವುದರಿಂದ ಕರೊನಾ ಎಷ್ಟರಮಟ್ಟಿಗೆ ತಡೆಗಟ್ಟಬಹುದು ಎಂಬ ಬಗ್ಗೆ ಇದುವರೆಗೆ ಸ್ಪಷ್ಟ ಉಲ್ಲೇಖ ಎಲ್ಲೂ ಇಲ್ಲ. ಮಾಸ್ಕ್ ಧರಿಸುವುದು ಪ್ರಯೋಜವೇ ಇಲ್ಲ ಎಂದು ಕೆಲವರು ವಾದಿಸುತ್ತಿದ್ದಾರೆ. 24 ಗಂಟೆ ಮಾಸ್ಕ್ ಹಾಕಿಕೊಂಡವರಿಗೂ ಕರೊನಾ ಸೋಂಕು ಬಂದಿದೆ ಎನ್ನುವುದು ಅವರ ವಾದ.
ಅದೇನೇ ಇದ್ದರೂ ಸದ್ಯ ಸರ್ಕಾರದ ನಿಯಮದ ಅನ್ವಯ ಕರೊನಾವನ್ನು ತಕ್ಕಮಟ್ಟಿಗಾದರೂ ನಿಯಂತ್ರಣ ಮಾಡಲು ಮಾಸ್ಕ್ ಕಡ್ಡಾಯವಾಗಿ ಧರಿಸಲೇಬೇಕು. ಇಲ್ಲದಿದ್ದರೆ ಭಾರಿ ಪ್ರಮಾಣದ ದಂಡ ವಿಧಿಸಲಾಗುತ್ತದೆ. ಸೀನುವಾಗ, ಕೆಮ್ಮುವಾಗ ಇಲ್ಲವೇ ಮಾತನಾಡುವ ಸಮಯದಲ್ಲಿ ಕರೊನಾ ಸೋಂಕು ಬೇರೆಯವರಿಗೆ ಹರಡದುವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಮಾಸ್ಕ್ ಕಡ್ಡಾಯ ಮಾಡಲಾಗಿದೆ.
ಆದರೆ ಇದೀಗ ತಾವು ಮಾಸ್ಕ್ ಧರಿಸುವುದಿಲ್ಲ ಎನ್ನುವ ಮೂಲಕ ಬಿಜೆಪಿ ಶಾಸಕ ಸುನೀಲ್ ನಾಯ್ಕ ಚರ್ಚೆಗೆ ಗ್ರಾಸರಾಗಿದ್ದಾರೆ. ನಾನು ಮಾಸ್ಕ್ ಧರಿಸದೇ ಕರೊನಾ ಜಾಗೃತಿ ಮಾಡುತ್ತೇನೆ ಎಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಾಸಕರಾಗಿರುವ ಸುನೀಲ್, ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ನಾನು ಮಾಸ್ಕ್ ಧರಿಸುವುದಿಲ್ಲ. ಮಾಸ್ಕ್ ಧರಿಸದೇ ಕರೊನಾ ವಿರುದ್ಧ ಜಾಗೃತಿ ಮಾಡುತ್ತೇನೆ ಎಂದಿದ್ದಾರೆ.
ಅವರು ಈ ವಿಷಯವನ್ನು ಓರ್ವ ಕರೊನಾ ಸೋಂಕಿತರಾಗಿ ಹೇಳಿರುವುದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ. ಕಳೆದ ಆಗಸ್ಟ್ನಲ್ಲಿ ಇವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಅವರು ಬಿಡುಗಡೆಗೊಂಡಿದ್ದಾರೆ.