ಐಎಎಸ್ ಅಧಿಕಾರಿ ಮಂಜುನಾಥ್ ವಿರುದ್ಧ ಲಂಚದ ಆರೋಪ: ಜಾಮೀನಿಗೆ ಅರ್ಜಿ- ಎಸಿಬಿಗೆ ಕೋರ್ಟ್ ನೋಟಿಸ್

manjunath
Published on

ಬೆಂಗಳೂರು: ಲಂಚ ಸ್ವೀಕಾರ ಪ್ರಕರಣದಲ್ಲಿ ಜಾಮೀನು ಕೋರಿ ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಸಲ್ಲಿಸಿರುವ ಅರ್ಜಿಗೆ ಒಂದು ವಾರದೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಹೈಕೋರ್ಟ್ ಸೂಚಿಸಿದೆ.

ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಐಎಎಸ್ ಅಧಿಕಾರಿ ಜೆ. ಮಂಜುನಾಥ್ ಸಲ್ಲಿಸಿರುವ ಜಾಮೀನು ಅರ್ಜಿ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಪೀಠದ ಮುಂದೆ ಬುಧವಾರ ವಿಚಾರಣೆಗೆ ನಿಗದಿಯಾಗಿತ್ತು.

ಅರ್ಜಿದಾರರ ಪರ ವಕೀಲರು, ಪ್ರಕರಣ ಕುರಿತು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ಬಳಿಕ ಎಸಿಬಿಗೆ ನೋಟಿಸ್ ಜಾರಿಗೊಳಿಸಿದ ಪೀಠ, ಅರ್ಜಿಗೆ 1 ವಾರದೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಜು.27ಕ್ಕೆ ಮುಂದೂಡಿತು.

ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಜು.4ರಂದು ಎಸಿಬಿ ತನಿಖಾಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಮಂಜುನಾಥ್ ಅವರ ಜಾಮೀನು ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಇತ್ತೀಚೆಗೆ ವಜಾಗೊಳಿಸಿತ್ತು. ಇದರಿಂದ, ಮಂಜುನಾಥ್ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಅರ್ಜಿಯಲ್ಲೇನಿದೆ?

ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಲಂಚ ಸ್ವೀಕರಿಸಿದ ಸಂದರ್ಭದಲ್ಲಿ ನಾನು ಸ್ಥಳದಲ್ಲಿಯೂ ಇರಲಿಲ್ಲ. ಪ್ರಕರಣದ ಸಂಬಂಧ ಸಂಗ್ರಹಿಸಲಾಗಿರುವ ದಾಖಲೆಗಳೂ ಸಹ ದಾಳಿ ನಡೆಸಿದ ದಿನ ಅಥವಾ ಅದಕ್ಕೂ ಮೊದಲು ಯಾವುದೇ ಹಂತದಲ್ಲಿ ನಾನು ಹಣಕ್ಕಾಗಿ ಬೇಡಿಕೆ ಇಟ್ಟಿರುವುದನ್ನು ತೋರಿಸುತ್ತಿಲ್ಲ. 50 ದಿನಕ್ಕೂ ಅಧಿಕ ಸಮಯದಿಂದ ತನಿಖೆ ನಡೆಯುತ್ತಿದ್ದು, ಇಡೀ ಪ್ರಕರಣದಲ್ಲಿ ಎಲ್ಲಿಯೂ ನನ್ನ ಪಾತ್ರವಿರುವ ಬಗ್ಗೆ ಕೇಳಿ ಬಂದಿರಲಿಲ್ಲ. ಮೊದಲ ಮತ್ತು ಎರಡನೇ ಆರೋಪಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಎಸಿಬಿ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿಯೂ ನನ್ನ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಕೆಲ ಬಾಹ್ಯ ಒತ್ತಡಗಳಿಂದ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದ್ದು, ಇದು ನ್ಯಾಯಸಮ್ಮತವಲ್ಲ. ಆದ್ದರಿಂದ, ಜಾಮೀನು ನೀಡಬೇಕು ಎಂದು ಮಂಜುನಾಥ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net