ಕಿಮ್ಸ್​ನಿಂದ ಮಗು ನಾಪತ್ತೆ ಕೇಸ್​ಗೆ ಟ್ವಿಸ್ಟ್​! ಪೊಲೀಸರಿಗೂ ಸಿಕ್ಕಿಲ್ಲ, ಸಿಸಿಟಿವಿಯೂ ಕಾಣಿಸಿಲ್ಲ- ದಿಢೀರ್​ ಪ್ರತ್ಯಕ್ಷ

kims
Published on

ಹುಬ್ಬಳ್ಳಿ: ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್​) ಆಸ್ಪತ್ರೆಯಲ್ಲಿ ನಿನ್ನೆ ಸೋಮವಾರ ರಾತ್ರಿ ದಿಢೀರ್​ ಎಂದು ಮಗುವೊಂದು ನಾಪತ್ತೆಯಾಗಿಬಿಟ್ಟಿತ್ತು. 40 ದಿನದ ಈ ಮಗುವನ್ನು ಉಮ್ಮೇ ಜೈನಾಬ್ ಹುಸೇನ್ ಸಾಬ್ ಶೇಖ್ ಅವರ ಮಗು ಇದಾಗಿದ್ದು, ಮಗುವಿನ ತಾಯಿ ಸಲ್ಮಾ ಚಿಕಿತ್ಸೆಗೆಂದು ಕರೆತಂದಿದ್ದರು. ಈ ಸಂದರ್ಭದಲ್ಲಿ ಮಗು ನಾಪತ್ತೆಯಾಗಿಬಿಟ್ಟಿತ್ತು.

ಮಗು ಇಲ್ಲದಿದ್ದರಿಂದ ಆಸ್ಪತ್ರೆ ಸಿಬ್ಬಂದಿ ದಿಗಿಲುಗೊಂಡಿದ್ದರು. ಕೂಡಲೇ ಸಿಸಿಟಿವಿ ಪರಿಶೀಲಿಸಲಾಗಿತ್ತು. ವಾರ್ಡ್​ನಿಂದಾಗಲಿ, ಕಾರಿಡಾರ್​ನಿಂದಾಗಲಿ ಮಗು ಕಾಣೆಯಾಗಿರಲಿಲ್ಲ. ಮಧ್ಯಾಹ್ನ ಊಟದ ಸಮಯದಲ್ಲಿ ಒಂದು ರಿಂದ ಎರಡು ಗಂಟೆ ವೇಳೆ ಘಟನೆ ನಡೆದಿರುವುದು ತಿಳಿದಿತ್ತು. ಭದ್ರತೆ ಬಿಗಿಯಾಗಿದ್ದರೂ ಕಳ್ಳತನ ಹೇಗೆ ನಡೆಯಿತು ಎಂಬುದರ ಕುರಿತು ತನಿಖೆ ಶುರುವಾಗಿತ್ತು. ಮಗುವನ್ನು ಹುಡುಕಲು ಪೊಲೀಸರು ಮೂರು ತಂಡ ರಚಿಸಿದ್ದರು. ಆದರೂ ಮಗು ಎಲ್ಲಿಯೂ ಸಿಕ್ಕಿರಲಿಲ್ಲ.

ಆದರೆ ಇದ್ದಕ್ಕಿದ್ದಂತೆಯೇ ಮಗು ಇಂದು ಬೆಳಗ್ಗೆ ದಿಢೀರ್​ ಪತ್ತೆಯಾಗಿದೆ. ಚರಂಡಿ ಕಟ್ಟೆ ಮೇಲೆ ಯಾರೋ ಇಟ್ಟು ಹೋಗಿದ್ದಾರೆ. ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಬಂದಿದ್ದ ಮಂಜುಳಾ ಎನ್ನುವವರು ಮಗು ಅಳುವ ಶಬ್ದ ನೋಡಿ ಹತ್ತಿರ ಹೋದಾಗ ಮಗು ಇದ್ದುದನ್ನು ನೋಡಿ, ಆಸ್ಪತ್ರೆಗೆ ಮಾಹಿತಿ ಮುಟ್ಟಿಸಿದ್ದಾರೆ. ನಂತರ ಹಿಂದಿನ ರಾತ್ರಿ ಕಳುವಾಗಿದ್ದ ಮಗು ಇದೇ ಎನ್ನುವುದು ತಿಳಿದಿದೆ.

ಹೆತ್ತಮ್ಮನತ್ತ ಎಲ್ಲರ ಚಿತ್ತ!

ಆದರೆ ಅಚ್ಚರಿಯ ವಿಷಯವೆಂದರೆ ಮಗುವನ್ನು ಕದ್ದದ್ದು ಯಾರು ಹಾಗೂ ಬಿಟ್ಟುಹೋದದ್ದು ಯಾಕೆ ಎಂದು. ಆದರೆ ಪ್ರಕರಣ ಆಳಕ್ಕೆ ಹೋದಾಗ ಪೊಲೀಸರ ಹಾಗೂ ಆಸ್ಪತ್ರೆ ಸಿಬ್ಬಂದಿಯ ಮೊದಲ ಚಿತ್ತ ಹೋಗಿರುವುದು ಮಗುವಿನ ಅಮ್ಮ ಸಲ್ಮಾರ ಮೇಲೆ. ಏಕೆಂದರೆ ಮಗು ಕಾಣೆಯಾಗಿದ್ದರೂ, ಆ ಬಗ್ಗೆ ಚಿಂತಿಸದೇ ಇವರು ತಮ್ಮೂರು ತಲುಪಿದ್ದರು. ಆದ್ದರಿಂದ ಇವರ ಮೇಲೆಯೇ ಹೆಚ್ಚಿನ ಅನುಮಾನ ಶುರುವಾಗಿದೆ.

ಇದನ್ನು ಸಿಸಿಟಿವಿ ಇಲ್ಲದ ಜಾಗದಲ್ಲಿನ ಕಿಟಕಿಯೊಂದರಿಂದ ಯಾರಿಗೋ ನೀಡಿರಬಹುದು. ನಂತರ ಪೊಲೀಸ್​ ತನಿಖೆ ಹೆಚ್ಚಾದ್ದರಿಂದ ಗಾಬರಿಗೊಂಡು ಅದನ್ನು ತೆಗೆದುಕೊಂಡು ಹೋದವರು ಅಲ್ಲಿ ತಂದು ಬಿಟ್ಟಿರಬಹುದು ಎಂದು ಪೊಲೀಸರು ಅನುಮಾನಿಸುತ್ತಿದ್ದಾರೆ.

ಇಷ್ಟೆಲ್ಲಾ ಆದ ಮೇಲೆ ಮಗು ಸಿಕ್ಕಿದೆ ಎಂದು ಪೊಲೀಸರು ಪಾಲಕರಿಗೆ ವಿಷಯ ತಿಳಿಸಿದಾಗ ಇಬ್ಬರೂ ಆಸ್ಪತ್ರೆಗೆ ಬಂದಿದ್ದು ಮಗುವನ್ನು ನೀಡುವಂತೆ ಕೇಳಿಕೊಂಡಿದ್ದಾರೆ. ತಮಗೆ ಮಗು ಸಿಕ್ಕಿರುವುದಕ್ಕೆ ಖುಷಿಯಾಗಿದೆ ಎಂದಿದ್ದಾರೆ. ಆದರೆ ಸದ್ಯಕ್ಕೆ ಪೊಲೀಸರು ಮಗುವನ್ನು ತಾಯಿಯ ಸುಪರ್ದಿಗೆ ಕೊಟ್ಟಿಲ್ಲ. ಮಗು ಪತ್ತೆಯಾಗಿದೆ ಎಂದು ಬೆಳಗ್ಗೆ 6.30ಕ್ಕೇ ಹೇಳಿದ್ದರೂ, ಪಾಲಕರು 9 ಗಂಟೆಗೆ ಬಂದಿರುವುದು ಇನ್ನಷ್ಟು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ಮಗು ಆರೋಗ್ಯದಿಂದ ಇದೆ. ರಾತ್ರಿ ಸೊಳ್ಳೆ ಕಚ್ಚಿರೋದು ಬಿಟ್ಟರೆ ಮತ್ತೇನು ಆಗಿಲ್ಲ. ಸದ್ಯಕ್ಕೆ ಮಗುವನ್ನು ಡಿಸ್ಚಾರ್ಜ್ ಮಾಡುತ್ತಿಲ್ಲ. 48 ಗಂಟೆಗಳ ಕಾಲ ಅಬ್ಸರ್ವೇಷನ್​ನಲ್ಲಿ ಇಡಲಾಗುತ್ತದೆ. ಮಗುವಿನ ಕಳ್ಳತನಕ್ಕೆ ಭದ್ರತಾ ವೈಫಲ್ಯ ಕಾರಣ ಎನ್ನಲಾಗುವುದಿಲ್ಲ ಎಂದಿದ್ದಾರೆ ವೈದ್ಯರು.

ಆಸ್ಪತ್ರೆಯ ಎಲ್ಲ ವಿಭಾಗಗಳಲ್ಲಿಯೂ 300ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳಿವೆ. ಆದರೆ ಎಲ್ಲಿಯೂ ಮಗುವನ್ನು ತೆಗೆದುಕೊಂಡು ಹೋಗುತ್ತಿರೋ ದೃಶ್ಯಗಳು ಸೆರೆಯಾಗಿಲ್ಲ. ಮಗುವಿನ ತಾಯಿಯೂ ಕಳ್ಳನನ್ನು ಗುರುತು ಹಿಡಿದಿಲ್ಲ. ಈ ಕುರಿತು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸದ್ಯಕ್ಕೆ ನಾವು ಮಗುವಿನ ಆರೈಕೆ ಬಗ್ಗೆ ಗಮನ ಹಸಿರಿದ್ದೇವೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.

ಮಗು ಪತ್ತೆಯಾಗಿದೆ ಎಂದು ಬೆಳಗ್ಗೆ 6.30ಕ್ಕೇ ಹೇಳಿದ್ದರೂ, ಬಂದಿರೋದು ಮಾತ್ರ 9 ಗಂಟೆ ವೇಳೆಗೆ. ಇದೆಲ್ಲವನ್ನು ಗಮನಿಸಿದಾಗ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ತನಿಖೆ ಮುಂದುವರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net