

ಹುಬ್ಬಳ್ಳಿ: ಇಲ್ಲಿನ ತಾರಿಹಾಳದ ಕಾರ್ಖಾನೆಯಲ್ಲಿ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದವರಲ್ಲಿ ಮೂವರು ಚಿಕಿತ್ಸೆಗೆ ಸ್ಪಂದಿಸಿದೆ ಮೃತಪಟ್ಟಿದ್ದಾರೆ.
ವಿಜಯಲಕ್ಷ್ಮಿ ಯಚ್ಚನಾಗರ, ಗೌರವ್ವ ಹಿರೇಮಠ ಹಾಗೂ ಮಾಳೇಶ ಹದ್ದನ್ನವರ ಮೃತಪಟ್ಟವರು.
ನಿನ್ನೆ (ಶನಿವಾರ) ರಾತ್ರಿ ಚಿಕಿತ್ಸೆ ಫಲಿಸದೆ ವಿಜಯಲಕ್ಷ್ಮಿ ಸಾವನ್ನಪ್ಪಿದ್ದರು. ಇಂದು ಗೌರವ್ವ ಹಾಗೂ ಮಾಳೇಶ ಮೃತಪಟ್ಟಿದ್ದಾರೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಮಾಹಿತಿ ನೀಡಿದ್ದಾರೆ.
ಮೂವರಿಗೂ ಶೇ.80ರಿಂದ 90ರಷ್ಟು ಸುಟ್ಟ ಗಾಯಗಳಾಗಿದ್ದವು. ವೈದ್ಯರ ಸತತ ಪ್ರಯತ್ನದ ನಂತರವೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಉಳಿದ ಐವರು ಗಾಯಾಳುಗಳಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಕೊಪ್ಪಳದಲ್ಲಿ ಧಾರವಾಡ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಪ್ರತಿಕ್ರಿಯೆ ನೀಡಿದ್ದು, 5 ಜನ ಆಸ್ಪತ್ರೆಯಲ್ಲಿ ಇದ್ದಾರೆ, ಕೂಡಲೇ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದಿದ್ದಾರೆ. ಅಲ್ಲಿ ಅನಧಿಕೃತವಾಗಿ ಸ್ಫೋಟಕ ಸಂಗ್ರಹಿಸಲಾಗಿತ್ತು ಎಂಬ ಆರೋಪ ಇದೆ. ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಮ್ಯಾನೇಜರ್ ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಎಲ್ಲ ತಪ್ಪಿತಸ್ಥರನ್ನ ಕಾನೂನು ವ್ಯಾಪ್ತಿಯಲ್ಲಿ ಶಿಕ್ಷೆ ನೀಡುತ್ತೇವೆ ಎಂದಿದ್ದಾರೆ.