

ಹುಬ್ಬಳ್ಳಿ: ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯನ್ನು ಸಿನಿಮೀಯ ರೀತಿಯಲ್ಲಿ ಬೈಕ್ನಲ್ಲಿ ಬಂದು ಅನಾಯಾಸವಾಗಿ ಗುಂಡಿನ ಸುರಿಮಳೆಗೈದು ಹೋಗಿರುವ ಭಯಾನಕ ಘಟನೆ ಹುಬ್ಬಳ್ಳಿಯ ದುರ್ಗಾ ಬಾರ್ ಬಳಿ ನಡೆದಿದೆ.
ಮಗನ ಮದುವೆ ಮುಗಿಸಿರುವ ಸಂಭ್ರಮದಲ್ಲಿದ್ದ ರೌಡಿಷೀಟರ್ ಫ್ರೋಟ್ ಇರ್ಫಾನ್ (52) ಮೇಲೆ ಗುಂಡಿನ ದಾಳಿ ನಡೆದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಇರ್ಫಾನ್ ಇಂದು ತಮ್ಮ ಮಗನ ಮದುವೆ ನಂತರ ಕಲ್ಯಾಣ ಮಂಟಪದ ಹೊರಗೆ ಬೀಗರಿಗೆ ಬೀಳ್ಕೊಡುಗೆ ನೀಡುತ್ತಿದ್ದರು. ಈ ವೇಳೆ ಗುಂಡಿನ ದಾಳಿ ನಡೆದಿದೆ.
ಮೂವರು ಯುವಕರು ಬುಲೆಟ್ ಬೈಕಿನಲ್ಲಿ ಬಂದು ನಾಲ್ಕು ಸುತ್ತು ಗುಂಡಿನ ದಾಳಿ ನಡೆಸಿದ್ದು, ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಹಳೇ ಹುಬ್ಬಳ್ಳಿಯ ವಿಶಾಲ ನಗರದ ಕಲ್ಯಾಣ ಮಂಟಪದ ಬಳಿ ಘಟನೆ ನಡೆದಿದೆ.
ಇದನ್ನೂ ಓದಿ: ಪ್ರೇಮಿಯ ಜತೆ ಮಗಳನ್ನೇ ಜೀವಂತ ಸುಟ್ಟುಕೊಂದ ಪಾಲಕರು!
ಧಾರವಾಡದ ಫ್ರೋಟ್ ಇರ್ಫಾನ್ ನಾಲ್ಕು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೌಡಿ ಷೀಟರ್ ಪಟ್ಟಿಯಲ್ಲಿ ಇವರ ಹೆಸರು ಇದೆ.
ಈ ಗುಂಡಿನ ದಾಳಿಗೆ ಹಳೇ ವೈಷಮ್ಯವೇ ಕಾರಣ ಎನ್ನಲಾಗುತ್ತಿದೆ. ಮೂರು ಗುಂಡು ಇರ್ಫಾನ್ಗೆ ತಗುಲಿದ್ದು ಸದ್ಯ ಸುಚಿರಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ನಂತರ ಹಳೇ ಹುಬ್ಬಳ್ಳಿಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ. ಸಜೀವ ಗುಂಡು ಹಾಗೂ ಒಂದು ಗುಂಡಿನ ಎಮ್ಟಿ ಕೇಸ್ ಸಹ ವಶಕ್ಕೆಪಡೆದಿದ್ದಾರೆ.