

ಬೆಂಗಳೂರು: ಕಳೆದ ಕೆಲ ದಿನಗಳಿಂದ ಏಕಾಏಕಿಯಾಗಿ ಭುಗಿಲೆದ್ದಿರುವ ಹಿಜಾಬ್ ಧಾರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸುತ್ತೋಲೆಯೊಂದನ್ನು ಹೊರಡಿಸಿದ್ದು, ವಿವಾದಕ್ಕೆ ಈಗ ತೆರೆ ಎಳೆದಿದೆ. ಹಿಜಾಬ್ ಧಾರಣೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಭಾರಿ ಗೊಂದಲ, ಹೇಳಿಕೆಗಳಿಗೆ ರಾಜ್ಯ ಸರ್ಕಾರದ ಈ ಸುತ್ತೋಲೆಯಿಂದಾಗಿ ತೆರೆ ಬೀಳುವಂತಾಗಿದೆ.
ಸುಪ್ರೀಂಕೋರ್ಟ್ ಹಾಗೂ ವಿವಿಧ ರಾಜ್ಯಗಳ ಹೈಕೋರ್ಟ್‌ಗಳು ನೀಡಿರುವ ತೀರ್ಪಿನ ಆಧಾರದ ಮೇಲೆ ರಾಜ್ಯ ಸರ್ಕಾರ ಈ ಸುತ್ತೋಲೆಯನ್ನು ಹೊರಡಿಸಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಯಾವ ರೀತಿಯಲ್ಲಿ ವಸ್ತ್ರ ಸಂಹಿತೆಯನ್ನು ಪಾಲಿಸಬೇಕು ಎಂಬ ಬಗ್ಗೆ ವಿವರಿಸಿದೆ.
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸತಕ್ಕದ್ದು. ಖಾಸಗಿ ಶಾಲೆಗಳು ತಮ್ಮ ಆಡಳಿತ ಮಂಡಳಿಗಳು ನಿರ್ಧರಿಸುವ ಸಮವಸ್ತ್ರವನ್ನೇ ಧರಿಸತಕ್ಕದ್ದು. ಪದವಿಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಆಯಾ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಅಥವಾ ಆಡಳಿತ ಮಂಡಳಿಗಳು ಸಮವಸ್ತ್ರವನ್ನು ನಿಗದಿಪಡಿಸದೇ ಇದ್ದಲ್ಲಿ, ಸಮಾನತೆ ಮತ್ತು ಏಕತೆಯನ್ನು ಕಾಪಾಡಿಕೊಂಡು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬರದಂತೆ ಇರುವ ಉಡುಪುಗಳನ್ನು ಧರಿಸಿಕೊಳ್ಳತಕ್ಕದ್ದು ಎಂದು ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ರಾಜ್ಯದ ಎಲ್ಲಾ ಶಾಲೆಗಳ ವಿದ್ಯಾರ್ಥಿ- ವಿದ್ಯಾರ್ಥನಿಯರು ಒಂದೇ ಕುಟುಂಬದ ರೀತಿಯಲ್ಲಿ ನಡೆದುಕೊಳ್ಳಬೇಕು ಹಾಗೂ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿರದೇ ಸಾಮಾಜಿಕ ನ್ಯಾಯದ ಪರವಾಗಿ ನಡೆದುಕೊಳ್ಳಬೇಕು ಎಂದು ಸರ್ಕಾರದ ಸುತ್ತೋಲೆಯಲ್ಲಿ ವಿವರಿಸಲಾಗಿದೆ.
ಯಾವುದೇ ಶಿಕ್ಷಣ ಸಂಸ್ಥೆಯ ಮೇಲ್ವಿಚಾರಣಾ ಸಮಿತಿಯು (ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ಎಸ್‌ಡಿಎಂಸಿ, ಖಾಸಗಿಇ ಶಾಲಾ ಕಾಲೇಜುಗಳಲ್ಲಿ ಪೋಷಕರು ಮತ್ತು ಶಿಕ್ಷಕರ ಸಮಿತಿ ಹಾಗೂ ಆ ಸಂಸ್ಥೆಯ ಆಡಳಿತ ಮಂಡಳಿ) ಸುಗಮ ಶೈಕ್ಷಣಿಕ ವಾತಾವರಣವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸುವ ಸದಾಶಯದಿಂದ ಸೂಕ್ತ ನೀತಿ ಸಂಹಿತೆಗಳನ್ನು ಆಯಾ ಶಾಲಾ ಕಾಲೇಜುಗಳಲ್ಲಿ ಸರ್ಕಾರದ ನೀತಿಗಳಿಗೆ ಅನುಸಾರವಾಗಿ ನಿಣರ್ಯಿಸಿ ಅಳವಡಿಸಿಕೊಳ್ಳಬಹುದಾಗಿದೆ.
ಅಂತಹ ಸಮಿತಿಯ ನಿಣರ್ಯವು ಆಯಾ ಶಾಲಾ ಕಾಲೇಜುಗಳಿಗೆ ಸಂಬಂಧಿಸಿದಂತೆ ಇರುತ್ತದೆ. ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಏಕರೂಪ ಕಲಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಕೂಲ ಆಗುವಂತೆ ಎಲ್ಲಾ ಶಾಲಾ ಕಾಲೇಜಿಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಕೆಲವು ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಧರ್ಮದ ಅನುಸಾರ ಆಚರಣೆಗಳನ್ನು ಪಾಲಿಸುತ್ತಿರುವುದು ಕಂಡುಬರುತ್ತಿದ್ದು ಇದರಿಂದ ಶಾಲಾ ಕಾಲೇಜುಗಳಲ್ಲಿ ಸಮಾನೆ ಮತ್ತು ಏಕತೆಗೆ ಧಕ್ಕೆ ಬರುತ್ತಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸತಕ್ಕದ್ದು. ಖಾಸಗಿ ಶಾಲೆಗಳು ತಮ್ಮ ಆಡಳಿತ ಮಂಡಳಿಗಳು ನಿರ್ಧರಿಸುವ ಸಮವಸ್ತ್ರವನ್ನೇ ಧರಿಸತಕ್ಕದ್ದು. ಪದವಿಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಆಯಾ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಅಥವಾ ಆಡಳಿತ ಮಂಡಳಿಗಳು ಸಮವಸ್ತ್ರವನ್ನು ನಿಗದಿಪಡಿಸದೇ ಇದ್ದಲ್ಲಿ, ಸಮಾನತೆ ಮತ್ತು ಏಕತೆಯನ್ನು ಕಾಪಾಡಿಕೊಂಡು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬರದಂತೆ ಇರುವ ಉಡುಪುಗಳನ್ನು ಧರಿಸಿಕೊಳ್ಳತಕ್ಕದ್ದು ಎಂದು ಸರ್ಕಾರದ ಸುತ್ತೋಲೆಯಲ್ಲಿ ವಿವರಿಸಲಾಗಿದೆ.