ವರುಣದ ಆರ್ಭಟಕೆ ನಲುಗಿದ ಮಂಡ್ಯ ಜಿಲ್ಲೆ: ಎಲ್ಲೆಲ್ಲೂ ಪ್ರವಾಹ... ಕ್ಷಣಕ್ಷಣಕ್ಕೂ ಆತಂಕ...

mandyarain
Published on

ಮಂಡ್ಯ: ಮಂಡ್ಯ ಜಿಲ್ಲೆಯಾದ್ಯಂತ ವರುಣ ರೌದ್ರಾವತಾರ ತೋರಿದ್ದಾನೆ. ಹಲವು ಊರುಗಳು ಅಕ್ಷರಶಃ ಪ್ರವಾಹಪೀಡಿತವಾಗಿವೆ. ಬಹುತೇಕ ಎಲ್ಲಾ ರಸ್ತೆಗಳು ಜಲಾವೃತಗೊಂಡಿವೆ.
ಮಂಡ್ಯದಲ್ಲಿ ಒಂದೇ ದಿನ ದಾಖಲೆಯ ಮಳೆಯಾಗಿದೆ. ನಿನ್ನೆ (ಸೋಮವಾರ) ರಾತ್ರಿ ಮಂಡ್ಯ ಜಿಲ್ಲೆಯಾದ್ಯಂತ 61.0 ಮಿಮೀ ಮಳೆಯಾಗಿದೆ. ಇದರ ಅರ್ಥ 2552% ಹೆಚ್ಚಳವಾಗಿ ಬಿದ್ದಿದೆ ಮಳೆ.

ಮಂಡ್ಯ-ನಾಗಮಂಗಲ ಹೆದ್ದಾರಿಯಲ್ಲಿ ಸಂಚಾರ ದುಸ್ತರವಾಗಿದ್ದು, ಒಂದು ಕಿಲೋಮೀಟರ್​ವರೆಗೂ ಮಂಡಿಯುದ್ದ ನೀರು ಹರಿಯುತ್ತಿದೆ. ರಸ್ತೆಯೇ ಗೊತ್ತಾಗದ ಸ್ಥಿತಿಯಲ್ಲಿ ನೀರು ಹರಿಯುತ್ತಿದೆ. ವಾಣಿಜ್ಯ ತೆರಿಗೆ ಕಚೇರಿಗೂ ನೀರು ನುಗ್ಗಿದ್ದು, ಮಂಡ್ಯದ ಬೀಡಿ ಕಾಲೋನಿ ಬಳಿ ಕಚೇರಿಗೂ ಹೋಗಲು ಉದ್ಯೋಗಿಗಳು ಪರದಾಡುವಂತಾಗಿದೆ.

ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಸಂಕಷ್ಟವಿದ್ದರೂ, ಈ ಬಾರಿ ಕೆರಗಳು ತುಂಬಿ ಹರಿಯುತ್ತಿರುವುದರಿಂದ ಸಮಸ್ಯೆ ಹೆಚ್ಚಾಗಿದೆ.

ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗ್ರಾಮದ ಮನೆಯೊಂದರಲ್ಲಿ ಕೊಟ್ಟಿಗೆಯಲ್ಲಿದ್ದ 40 ಕುರಿಗಳ ಬಲಿಯಾಗಿದ್ದು, ಪವಾಡ ಸದೃಶ್ಯ ರೀತಿಯಲ್ಲಿ ಮನೆಯವರು ಪಾರಾಗಿದ್ದಾರೆ. ಉಮ್ಮಡಹಳ್ಳಿ ಗ್ರಾಮದ ಯಶೋದಮ್ಮ ಮನೆ ಕುಸಿದು ದುರ್ಘಟನೆ ಸಂಭವಿಸಿದೆ. ಮನೆಯ ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ ಕುರಿಗಳು ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟಿವೆ. ಪರಿಹಾರಕ್ಕಾಗಿ ತಾಲೂಕು ಆಡಳಿತಕ್ಕೆ ಕುಟುಂಬಸ್ಥರು ಮನವಿ ಮಾಡುತ್ತಿದ್ದಾರೆ.

ಮದ್ದೂರು ಸಮೀಪ ಶಿಂಷಾನದಿ ಸಮೀಪ ಗುಡಿಸಲು ಹಾಕಿಕೊಂಡಿದ್ದ ಗೋವಿಂದಪ್ಪ ಅವರಿಗೆ ಸೇರಿದ್ದ 15ಕ್ಕೂ ಹೆಚ್ಚು ಮೇಕೆಗಳು ಕೊಚ್ಚಿ ಹೋಗಿವೆ. ಇನ್ನು, ಮಂಡ್ಯದ ಬೀಡಿ ಕಾಲೋನಿ ಸಂಪೂರ್ಣ ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿದ್ದರಿಂದ ರಾತ್ರಿ ನಿದ್ದೆ ಇಲ್ಲದೇ ಪರದಾಡಿದ್ದಾರೆ. ಮಳೆಯಬ್ಬರಕ್ಕೆ ಮಳವಳ್ಳಿ ತಾಲೂಕು ಮಾರ್ಕಾಲು ಕೆರೆ ಕೋಡಿಬಿದ್ದು ಲಕ್ಷಾಂತರ ಮೀನುಗಳು ಕೊಚ್ಚಿ ಹೋಗಿವೆ. ಇದರಿಂದ ಕರೆ ಗುತ್ತಿಗೆ ಪಡೆದವರಿಗೆ ನಷ್ಟ. ಎದುರಾಗಿದೆ.

ಈ ಮಧ್ಯೆ, ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ಪ್ರವಾಹದಲ್ಲಿ ಸಿಲುಕಿದ್ದ ಸೆಕ್ಯೂರಿಟಿ ಗಾರ್ಡ್ ರಕ್ಷಣೆ ಮಾಡಲಾಗಿದೆ. ಅಣೆದೊಡ್ಡಿ ಗ್ರಾಮದ ಶಿಂಷಾ ನದಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಎನ್ನೆಸ್ಸೆಲ್ ಕಾರ್ಖಾನೆಯ ಜಾಕ್ ವೆಲ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ದಿನೇಶ್ ಎಂಬುವವರನ್ನು ರಕ್ಷಣೆ ಮಾಡಲಾಗಿದೆ.

ಅಸ್ಸಾಂ ಮೂಲದ ದಿನೇಶ್, ದಿಢೀರನೇ ಉಂಟಾದ ಪ್ರವಾಹಕ್ಕೆ ಸೋಮವಾರ ರಾತ್ರಿ ಸಿಲುಕಿ ಪರದಾಡುತ್ತಿದ್ದರು. ಇಂದು ಬೆಳಗ್ಗೆ ಗ್ರಾಮಸ್ಥರು ಮತ್ತು ಕಾರ್ಖಾನೆಯರಿಗೆ ವಿಚಾರ ತಿಳಿದು ತಕ್ಷಣ ರಕ್ಷಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಮತ್ತೊಬ್ಬ ಯುವಕ ಪ್ರವಾಹದ ನಡುವೆ ವಾಪಸ್ ಬರಲಾಗದೆ ಅಲ್ಲೇ ಸಿಲುಕಿಕೊಂಡು ಭಯಭೀತನಾಗಿದ್ದ. ನಂತರ ಗ್ರಾಮಸ್ಥರು ಮತ್ತು ಕಾರ್ಖಾನೆಯ ಸಿಬ್ಬಂದಿ ದೋಣಿಯ ಸಹಾಯದಿಂದ ಆತನನ್ನೂ ರಕ್ಷಿಸಲಾಗಿದೆ.

ಶ್ರೀರಂಗಪಟ್ಟಣ ತಾಲೂಕಿನ ಕೂಡಲಕುಪ್ಪೆ ಗ್ರಾಮದ ಜಮೀನಿನ ಕಿರುನಾಲೆಯಲ್ಲಿ ವೃದ್ಧೆಯೊಬ್ಬರ ಶವ ತೇಲಿ ಬಂದಿದೆ. ಗ್ರಾಮದ ಜವರ ಎಂಬುವರ ಕೃಷಿ ಜಮೀನಿನಲ್ಲಿ ಶವ ಪತ್ತೆಯಾಗಿದೆ. ಸುಮಾರು 75 ವರ್ಷದ ವೃದ್ಧೆಯಾಗಿದ್ದು, ಮಳೆ ನೀರಿನ ರಭಸಕ್ಕೆ ಕಿರುನಾಲೆಯಲ್ಲಿ ಶವ ತೇಲಿ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net