

ಹಾವೇರಿ: ಯೂಕ್ರೇನ್ನಲ್ಲಿ ಶೆಲ್ ದಾಳಿಯಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಗ್ಯಾನಗೌಡರ್ ನಿವಾಸಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ನೀಡಿ ಸಾಂತ್ವನ ಹೇಳಿದರು. ಯಾವುದಕ್ಕೂ ಹೆದರದೇ ಧೈರ್ಯದಿಂದಿರಿ. ನಿಮ್ಮ ಜೊತೆಗೆ ನಾವಿದ್ದೇವೆ. ಸರಕಾರ ಗಟ್ಟಿಯಾಗಿ ನಿಲ್ಲಲಿದೆ ಎಂದು ರಾಜ್ಯಪಾಲರು ಧೈರ್ಯ ತುಂಬಿದರು.
ನವೀನ್ ತಂದೆ ಶೇಖರಗೌಡ ಮತ್ತು ತಾಯಿ ವಿಜಯಲಕ್ಷ್ಮೀ ಸೇರಿದ ಕುಟುಂಬಸ್ಥರಿಗೆ ಕೈ ಮುಗಿದು ನಮಸ್ಕರಿಸಿ ಸಾಂತ್ವನ ಹೇಳಿದರು. ಕುಟುಂಬಸ್ಥರೊಂದಿಗೆ ಮಾತನಾಡಿದ ಅವರು, ಮಾರ್ಚ್ 21 ರಂದು ನವೀನ್ ಮೃತದೇಹ ಬಂದಾಗ ನಾನೂ ಬರಬೇಕು ಎಂದುಕೊಂಡಿದ್ದೆ. ಆದರೆ, ಮಧ್ಯಪ್ರದೇಶದಲ್ಲಿ ಮೊದಲೇ ಕಾರ್ಯಕ್ರಮ ನಿಗದಿ ಆಗಿದ್ದರಿಂದ ಬರಲು ಆಗಲಿಲ್ಲ. ಯಾವುದಕ್ಕೂ ಹೆದರಬೇಡಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ಹೇಳಿದರು.
ಈ ವೇಳೆ ಮಾತನಾಡಿದ ಶೇಖರಗೌಡ ಅವರು, ಮಾರ್ಚ್ 1ರಂದು ನವೀನ್ ಮೃತಪಟ್ಟಾಗ ಆ ದಿನವೇ ರಾಜ್ಯಾಪಾಲರು ಕರೆ ಮಾಡಿ ಮಾತನಾಡಿದ್ದರು. ನನ್ನ ಹಿರಿಯ ಮಗ ಹರ್ಷನಿಗೆ ಇದೇ ರಾಜ್ಯಪಾಲರು ಗೋಲ್ಡ್ ಮೆಡಲ್ ಕೊಟ್ಟಿದ್ದರು. ಕಿರಿಯ ಮಗನಿಗೆ ಹೀಗಾಗಿ ಹೋಯಿತು ಎಂದು ರಾಜ್ಯಪಾಲರು ದುಃಖಿಸಿದರು ಎಂದು ತಿಳಿಸಿದರು.